ಕಾಂಗ್ರೆಸ್ ಪಕ್ಷಕ್ಕೆ ಸೇರಲು ಹಲವು ಬಿಜೆಪಿ ಶಾಸಕರು ಸಿದ್ಧ : ಮಾಜಿ ಸಿಎಂ ಸಿದ್ದರಾಮಯ್ಯ

Update: 2018-08-10 14:23 GMT

ವಿಜಯಪುರ, ಆ. 10: ಕೋಟ್ಯಂತರ ರೂಪಾಯಿ ದುಡ್ಡು ಕೊಟ್ಟು ಕುರಿ, ದನ, ಎಮ್ಮೆ ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡುವುದೇ ‘ಆಪರೇಷನ್ ಕಮಲ’ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಆಲಮಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ 20ರಿಂದ 25 ಕೋಟಿ ರೂ.ಗಳನ್ನು ಕೊಟ್ಟು ಶಾಸಕರನ್ನು ಖರೀದಿಸಿದ್ದರು. ಅಧಿಕಾರಕ್ಕಾಗಿ ಅವರು ಅನೈತಿಕ ರಾಜಕಾರಣ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

"ಇದೀಗ ಬಿಜೆಪಿಯ ಸಾಕಷ್ಟು ಮಂದಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ನಾವು ಬೇಡಪ್ಪ, ನೀವು ಅಲ್ಲೇ ಇರೀ ಎಂದು ಹೇಳಿದ್ದೇವೆ. ರಾಜ್ಯದ ಜನತೆ ಮೈತ್ರಿ ಸರಕಾರಕ್ಕೆ ಮತ ನೀಡಿದ್ದು, ಅದರನ್ವಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ನಡೆಯುತ್ತಿದೆ" ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ಎಂದೆಂದಿಗೂ ಅಖಂಡ. ಇಲ್ಲಿನ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಇಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು. ಅದಕ್ಕಾಗಿ ಹೋರಾಟ ಮಾಡುವುದರಲ್ಲಿ ತಪ್ಪಿಲ್ಲ. ಪ್ರತ್ಯೇಕತೆಗೆ ಹೋರಾಟ ಮಾಡುವುದನ್ನು ನಾನು ವಿರೋಧಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News