ಕೇವಲ ಆರು ರೂ.ಚಿಲ್ಲರೆಗಾಗಿ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ
ವಿಜಯಪುರ, ಆ. 10: ಕೇವಲ 6ರೂ.ಚಿಲ್ಲರೆ ಹಣ ಹಿಂದಿರುಗಿಸುವ ವಿಚಾರಕ್ಕಾಗಿ ಪ್ರಯಾಣಿಕನೊಬ್ಬ ನಿರ್ವಾಹಕನ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಇಂಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಇಂಡಿ ತಾಲೂಕಿನ ತಾಂಬಾದಲ್ಲಿ ಸುಲೇಮಾನ್ ಎಂಬ ಪ್ರಯಾಣಿಕ, ನಿರ್ವಾಹಕ ಉಸ್ಮಾನಸಾಬ್ ಎಂಬವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅವರು ಇಂಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರು ರೂ.ಚಿಲ್ಲರೆ ಹಣ ನೀಡುವ ವಿಚಾರದಲ್ಲಿ ಪ್ರಯಾಣಿಕ ಸುಲೇಮಾನ್ ಮತ್ತು ನಿರ್ವಾಹಕ ಉಸ್ಮಾನಸಾಬ್ ಮಧ್ಯೆ ಜಗಳ ನಡೆದಿತ್ತು. ಇದರಿಂದ ಆಕ್ರೋಶಿತನಾಗಿದ್ದ ಸುಲೇಮಾನ್ ಶುಕ್ರವಾರ ನಿರ್ವಾಹಕ ಉಸ್ಮಾನಸಾಬ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಹಲ್ಲೆಯಿಂದ ನಿರ್ವಾಹಕನ ತಲೆ ಹಾಗೂ ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಸಂಬಂಧ ಇಂಡಿ ಗ್ರಾಮೀಣ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.