ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ವಿಜಯ್ ಕುಮಾರ್ ಕರೆ
ಚಿಕ್ಕಮಗಳೂರು ಆ.10: ಕೇಂದ್ರದ ಜನ ವಿರೋಧಿ ಬಿ.ಜೆ.ಪಿ. ಸರಕಾರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪದಚ್ಯುತಿಗೊಳಿಸಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಲು ಕಾರ್ಯಕರ್ತರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಡಿ.ಎಲ್. ವಿಜಯ್ ಕುಮಾರ್ ಕರೆ ನೀಡಿದರು.
ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 76ನೇ ಕ್ವಿಟ್ ಇಂಡಿಯಾ ದಿನಾಚರಣೆಯ ಅಂಗವಾಗಿ ನಡೆದ -ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಕ್ವಿಟ್ ಇಂಡಿಯಾ ಆಂದೋಲನ ಒಂದು ಪ್ರಮುಖ ಘಟನೆಯಾಗಿದ್ದು, ದೇಶಪಿತ ಮಹಾತ್ಮ ಗಾಂಧಿ, ನೆಹರು, ಬಾಲಗಂಗಾಧರ ತಿಲಕ್, ಗೋಖಲೆ, ಮೌಲಾನ ಅಜಾದ್, ಸುಬಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ಡಾ.ರಾಜೆಂದ್ರ ಪ್ರಸಾದ್ ಸೇರಿದಂತೆ ಇನ್ನು ಅನೇಕ ಪ್ರಮುಖ ನಾಯಕರುಗಳು ಪಾಲ್ಗೊಂಡು ಬ್ರಿಟಿಷರನ್ನು ಹೊರಹಾಕಲು ಈ ಆಂದೋಲನ ರೂಪಿಸಿದ್ದರು.
ಸ್ವಾತಂತ್ರ್ಯ ದೊರೆತ ನಂತರದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಹಲವು ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಹಾಗೂ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿ ಭಾರತ ದೇಶವನ್ನು ಜಗತ್ತಿನಲ್ಲಿ ಗುರುತಿಸುವ ಮಟ್ಟಕ್ಕೆ ತೆಗೆದುಕೊಂಡು ಹೋದ ಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಆದರೆ, ಇತ್ತೀಚಿಗೆ ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಪಕ್ಷವು ದೂರದೃಷ್ಠಿ ಇಲ್ಲದೆ ಸಂಕೋಚಿತ ಭಾವನೆಗಳನ್ನು ಜನರಲ್ಲಿ ಮೂಡಿಸುವ ಮೂಲಕ ಹಾಗೂ ಧರ್ಮ, ಜಾತಿ, ವರ್ಗಗಳ ಸಂಘರ್ಷವನ್ನು ಹುಟ್ಟು ಹಾಕುವ ಮೂಲಕ ಜನವಿರೋಧಿಯ ನಿಲುವನ್ನು ಪಾಲುಸುತ್ತಿದೆ ಎಂದರು.
ಬಿಜೆಪಿ ಪಕ್ಷ ಹಲವು ಆಶ್ವಾಸನೆಗಳನ್ನು ಕೊಡುವ ಮೂಲಕ ಅಧಿಕಾರಕ್ಕೆ ಬಂದು ಅವುಗಳನ್ನು ಅನುಷ್ಠಾನಕ್ಕೆ ತರದೆ ಜನರನ್ನು ದಿಕ್ಕುತಪ್ಪಿಸುತ್ತಿದೆ. ಕಾಂಗ್ರೆಸ್ ಮೇಲೆ ಬೋಪರ್ಸ್ ಗೂಬೆಯನ್ನು ಕೂರಿಸಿ ಬಹಳಷ್ಟು ಚರ್ಚೆ ಮಾಡುತ್ತಿದ್ದ ಬಿ.ಜೆ.ಪಿ. ಪಕ್ಷ ದೇಶದಲ್ಲಿ ದೊಡ್ಡದಾದ ರಾಫಲ್ ಹಗರಣದಲ್ಲಿ ಸಿಲುಕಿ ಸತ್ಯಾಂಶವನ್ನು ಮುಚ್ಚಿ ಮೌನವಾಗಿ ಕುಳಿತಿದೆ. ಇದೆಲ್ಲ ಅರಿವು ಜನಸಾಮಾನ್ಯರಲ್ಲಿ ಮೂಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಜನ ಸಜ್ಜಾಗಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮಹಿಳಾ ಘಟಕದ ಉಪಾಧ್ಯಾಕ್ಷೆ ಶ್ರೀಮತಿ ರೇಖಾ ಹುಲಿಯಪ್ಪಗೌಡ ಕ್ವಿಟ್ ಇಂಡಿಯಾ ಚಳುವಳಿಯ ಬಗ್ಗೆ ಮಾತನಾಡಿ ಅದರ ಉದ್ದೇಶ, ಪರಿಣಾಮ ಹಾಗೂ ಇಂದಿನ ಅವಶ್ಯಕತೆಗಳ ಬಗ್ಗೆ ಮಾಹಿತಿ ನೀಡಿದರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಶಾಂತೇಗೌಡ, ಕೆ.ಪಿ.ಸಿ.ಸಿ. ಸದಸ್ಯರಾದ ಕೆಂಪನಹಳ್ಳಿ ಮಂಜಣ್ಣ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಪ್ರಾಸ್ತಾವಿಕ ಮಾತನಾಡಿದರು. ಸೇವಾದಳದ ಜಿಲ್ಲಾಧ್ಯಕ್ಷ ಸಿಲ್ವಸ್ಟರ್ ಸ್ವಾಗತಿಸಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ವಂದಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ನೇಮಕವಾಗಿರುವ ಶ್ರೀಮತಿ ರೇಖಾ ಹುಲಿಯಪ್ಪಗೌಡರವರನ್ನು ಗೌರವಿಸಲಾಯಿತು.
ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ರಾಜಕೀಯ ಪಟು ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಇಂದಿರಾ ಗಾಂಧಿಯವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಧವನ್ ಹಾಗೂ ಸ್ಥಳೀಯ ಕಾಂಗ್ರೆಸ್‍ನ ಕೆಲವು ಮುಖಂಡರುಗಳಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಹೂವಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ನಗರಸಭೆ ಸದಸ್ಯರಾದ ರೂಬೆನ್ ಮೊಸಸ್, ಹೆಚ್.ಎಸ್. ಪುಟ್ಟಸ್ವಾಮಿ, ಜೇಮ್ಸ್ ಡಿಸೋಜ, ಕಾಲುಬಾ, ಐಟಿ ಸೆಲ್‍ನ ಜಿಲ್ಲಾಧ್ಯಕ್ಷ ಕಾರ್ತಿಕ್, ಕಿಸಾನ್ ಸೆಲ್‍ನ ಅಧ್ಯಕ್ಷ ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್‍ನ ಬಿ.ಎಮ್. ಸಂದೇಶ್, ಪ್ರಸಾದ್ ಅಮಿನ್, ಹಿರೆಕೊಳಲೆ ಪ್ರಕಾಶ್, ಶಿವಾನಂದ್, ಸುರೇಶ್, ನೂರಿ, ವಾಣಿ ಮುಂತಾದವರು ಉಪಸ್ಥಿತರಿದ್ದರು.