ಬಿಜೆಪಿಯ 20 ಶಾಸಕರು ಜೆಡಿಎಸ್‌ಗೆ ಬರಲು ಸಿದ್ಧ : ವಿಪಕ್ಷಗಳಿಗೆ ತಿರುಗೇಟು ನೀಡಿದ ಸಚಿವ ರೇವಣ್ಣ

Update: 2018-08-10 15:39 GMT

ಹಾಸನ, ಆ.10: ಬಿಜೆಪಿಯಿಂದ 20ಕ್ಕೂ ಹೆಚ್ಚು ಶಾಸಕರು ಜೆಡಿಎಸ್‌ಗೆ ಬರಲು ಸಿದ್ಧರಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗದಿರಲಿ ಎಂದು ನಾವು ಸುಮ್ಮನಿದ್ದೇವೆ ಎಂದು ವಿಪಕ್ಷಗಳ ಹೇಳಿಕೆಗಳಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.

ನಗರದ ಖಾಸಗಿ ಹೊಟೇಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯವರು ಸುಳ್ಳು ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಅವರು ಜೆಡಿಎಸ್‌ಗೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ಬಿಜೆಪಿ ಶಾಸಕರು ಜೆಡಿಎಸ್‌ಗೆ ಬರುವುದರಿಂದ ಯಡಿಯೂರಪ್ಪರ ಆರೋಗ್ಯದಲ್ಲಿ ವ್ಯತ್ಯಾಸವಾಗದಿರಲಿ ಎಂದು ನಾವೇ ಅವರನ್ನು ತಡೆದಿದ್ದೇವೆ ಎಂದು ಹೇಳಿದರು.

ಬೆಳಗಾವಿಯ ಕೆಶಿಪ್-2 ವ್ಯಾಪ್ತಿಯ 618 ಕೋಟಿ ರೂ. ಕಾಮಗಾರಿ ಈಗಾಗಲೇ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲಾಗಿದೆ. ಅಲ್ಲದೆ ಗೋಕಾಕ್ ಹಾಗೂ ಧಾರವಾಡದಲ್ಲಿ ಉಪ ವಿಭಾಗ ಕಚೇರಿ ಇದ್ದು, ಇದನ್ನು ವರ್ಗಾವಣೆ ಮಾಡಿಲ್ಲ. ಕಾರಣವಿಲ್ಲದೆ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಶಿರಾಡಿ ಘಾಟ್ ರಸ್ತೆ ಕಾಮಗಾರಿ ಮುಗಿದಿದೆ. ಅಲ್ಲಿದ್ದ ಕಚೇರಿಯನ್ನು ಹೊಳೆನರಸೀಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ ಹಾಸನ, ಅರಸೀಕೆರೆ, ಬೇಲೂರಿಗೆ ಕೂಡಾ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು 600 ಕೋಟಿ ರೂ.ಗೂ ಹೆಚ್ಚು ಕಾಮಗಾರಿಗಳು ನಡೆಯುತ್ತಿವೆ. ಅಧಿಕಾರಿಗಳು ಬೇರೆ ಕಡೆಯಿಂದ ಬಂದು ಕಾಮಗಾರಿಯನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಸಿಎಂ ಕುಮಾರಸ್ವಾಮಿ ಅವರು ಈಗಾಗಲೇ ಒಂದು ಲಕ್ಷ ರೂ.ವರೆಗಿನ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಂದರೆ ಆಗಸ್ಟ್ 15 ಅಥವಾ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ರೈತರಿಗೆ ಹೊಸದೊಂದು ಗಿಫ್ಟ್ ನೀಡುವ ಮೂಲಕ ರೈತರು ಮತ್ತು ಜನಸಾಮಾನ್ಯರಿಗೆ ಉತ್ತಮ ಯೋಜನೆಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ 24 ಸಾವಿರ ಕೋಟಿ ರೂ. ಮೊತ್ತದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಇದರಲ್ಲಿ ಉತ್ತರ ಕರ್ನಾಟಕದ ರಸ್ತೆಗಳು ಇವೆ. ಉತ್ತರ ಕರ್ನಾಟಕದಲ್ಲಿ 4 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಮಾಜಿ ಸಿ.ಎಂ ಜಗದೀಶ್ ಶೆಟ್ಟರ್ ಮಾಡಲಾಗದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ.
ಎಚ್.ಡಿ.ರೇವಣ್ಣ , ಲೋಕೋಪಯೋಗಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News