ಹಾವೇರಿ : ಅರೆಬೆಂದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ

Update: 2018-08-10 16:22 GMT
ರೇಣುಕಾ ಪಾಟೀಲ್

ಹಾವೇರಿ,ಆ.10: ನಗರದ ಕೆಎಲ್‌ಇ ವಿದ್ಯಾಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಅರೆಬೆಂದ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ವರದಳ್ಳಿ ಸೇತುವೆ ಪಕ್ಕದ ಪೊದೆಯಲ್ಲಿ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿನಿಯನ್ನು ಸವಣೂರು ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ರೇಣುಕಾ ಪಾಟೀಲ್ (17) ಎಂದು ಗುರುತಿಸಲಾಗಿದೆ. ಈಕೆ ಜಿಎಚ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಆ.6ರಂದು ಕಾಲೇಜಿಗೆ ತೆರಳಿದ್ದ ರೇಣುಕಾ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಳು. ರೇಣುಕಾ ಆಕೆಯ ಅಣ್ಣ ಮತ್ತು ತಂಗಿ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನಲ್ಲಿ ಕಲಿಯುತ್ತಿದ್ದರು. ತಂಗಿ ಕೆಲಸದ ನಿಮಿತ್ತ ಅಂದು ಕಾಲೇಜಿಗೆ ತೆರಳಿರಲಿಲ್ಲ. ಅಲ್ಲದೆ, ಅಣ್ಣ ಕಲಾವಿಭಾಗದಲ್ಲಿ ಕಲಿಯುತ್ತಿರುವುದರಿಂದ ತರಗತಿ ಇಲ್ಲದ ಕಾರಣ ಬೇಗ ಮನೆಗೆ ಹಿಂದಿರುಗಿದ್ದ. ಕತ್ತಲೆಯಾದರೂ ರೇಣುಕಾ ಮನೆಗೆ ಬಾರದಿರುವುದನ್ನು ಗಮನಿಸಿದ ಮನೆಮಂದಿ ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದ್ದರು. ಆಕೆ ಎಲ್ಲೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ಬಳಿಕ ಪೋಷಕರು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಹಾಗೂ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರಾದರೂ ರೇಣುಕಾ ಪತ್ತೆಯಾಗಿರಲಿಲ್ಲ. ಆದರೆ, ಗುರುವಾರ ರಾಷ್ಟ್ರೀಯ ಹೆದ್ದಾರಿ 4ರ ವರದಳ್ಳಿ ಸೇತುವೆ ಪಕ್ಕದ ಪೊದೆಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಶವ ಗುರುತು ಪತ್ತೆ ಹಚ್ಚುವಂತೆ ಪೋಷಕರಿಗೆ ಪೊಲೀಸರು ತಿಳಿಸಿದ್ದರು. ಅದಾಗಲೇ ಆಕೆಯ ತಂದೆ ತಾಯಿ ಮೂರ್ಛೆ ಹೋಗಿದ್ದ ಕಾರಣ ಆಕೆಯ ಅಜ್ಜನನ್ನು ಸ್ಥಳಕ್ಕೆ ಕರೆದೊಯ್ದು ಗುರುತು ಪತ್ತೆ ಹಚ್ಚಿದ್ದಾರೆ.

ಪೊದೆಯಲ್ಲಿರುವುದು ರೇಣುಕಾ ಮೃತದೇಹ ಎಂದು ಆಕೆಯ ಅಜ್ಜ ದೃಢಪಡಿಸಿದ ಕಾರಣ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸ್ಥಳಕ್ಕೆ ಎಸ್ಪಿ ಪರಶುರಾಮ, ಡಿವೈಎಸ್ಪಿ ಕುಮಾರ್ ಹಾಗೂ ಹಾವೇರಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅತ್ಯಾಚಾರ ಗೈದು ಕೊಲೆ ಶಂಕೆ

ಆ.6ರಂದು ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಕಾಮುಕರು ರೇಣುಕಾಳನ್ನು ಅಪಹರಿಸಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ವರದಹಳ್ಳಿ ಸೇತುವೆಯ ಬಳಿ ಇರುವ ಪೊದೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಸಾಧ್ಯತೆ ಹೆಚ್ಚಾಗಿದೆ. ಬಳಿಕ ಸಾಕ್ಷ ನಾಶಪಡಿಸುವ ಉದ್ದೇಶದಿಂದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಮತ್ತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಮಗಳು ಶವವಾಗಿ ಬಂದಿದ್ದಾಳೆೆ. ನಮಗೆ ಯಾರ ಮೇಲೂ ಸಂಶಯವಿಲ್ಲ. ಯಾವ ಕಾರಣಕ್ಕಾಗಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬುದೂ ತಿಳಿಯುತ್ತಿಲ್ಲ. ಆಕೆಯ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು.
ಬಸನ ಗೌಡ ಪಾಟೀಲ್, ಮೃತ ರೇಣುಕಾಳ ತಂದೆ

ನಗರದ ಹಾವೇರಿ ಉಪವಿಭಾಗದ ಡಿವೈಎಸ್ಪಿ ಕುಮಾರಪ್ಪ, ಡಿಸಿಆರ್‌ಬಿ ಡಿವೈಎಸ್ಪಿ ನಾರಾಯಣ ಬರಮನಿ ಹಾಗೂ ಡಿಸಿಐಬಿ ನಿರೀಕ್ಷಕ ಸಂತೋಷ್ ಪಾಟೀಲ್ ನೇತೃತ್ವದ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದ್ದು, ಈ ಸಂಬಂಧ ಕೆಲವು ಸುಳಿವುಗಳು ಲಭ್ಯವಾಗಿವೆ.

ಕೆ. ಪರಶುರಾಮ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News