ಉಕ್ಕಿ ಹರಿದ ಕಪಿಲಾ ನದಿ : ಮೈಸೂರು-ನಂಜನಗೂಡು ರಸ್ತೆ ಜಲಾವೃತ

Update: 2018-08-10 16:42 GMT

ಮೈಸೂರು,ಆ.10: ಸುಮಾರು ಐವತ್ತು ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು ಮೈಸೂರು-ನಂಜನಗೂಡು ರಸ್ತೆ ಜಲಾವೃತಗೊಂಡಿದೆ.
ಕೇರಳದ ವೈನಾಡಿಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಪ್ರವಾಹ ರೀತಿಯಲ್ಲಿ ನೀರು ಹರಿದು ಬರುತಿದ್ದು, ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತಿದ್ದು ಕಪಿಲಾ ನದಿ ತುಂಬಿ ಹರಿಯುತ್ತಿದೆ.

ಕಪಿಲಾ ನದಿಯಲ್ಲಿ ಹೆಚ್ಚಿನ ನೀರು ಹೊರ ಬರುತ್ತಿರುವುದರಿಂದ ನಂಜನೂಡು ತಾಲ್ಲೂಕಿನ ಹಲವು ಗ್ರಾಮಗಳ ಗದ್ದೆಗಳು ಜಲಾವೃತಗೊಂಡಿವೆ. ಸುಮಾರು ಐವತ್ತು ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನೀರು ಹೊರಬರುತ್ತಿದ್ದು, ಮೈಸೂರು ನಂಜನಗೂಡು ರಸ್ತೆಯ ಮಲ್ಲನ ಮೂಲೆ ಮಠದ ಬಳಿ ರಸ್ತೆಗೆ ನೀರು ಹರಿದು ಬಂದ ಪರಿಣಾಮ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿದೆ.

ನಂಜನಗೂಡಿನ ಕಪಿಲಾ ದಡದಲ್ಲಿರುವ ಶ್ರೀಚಾಮುಂಡೇಶ್ವರಿ ದೇವಸ್ಥಾನ ಜಲಾವೃತಗೊಂಡಿದ್ದು, ಭಕ್ತಾಧಿಗಳನ್ನು ಒಳಬಿಡಲಾಗುತ್ತಿಲ್ಲ. ಇನ್ನೂ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಮುಡಿಕಟ್ಟೆ ಜಲಾವೃತಗೊಂಡಿದೆ. ಇತಿಹಾಸ ಪ್ರಸಿದ್ದ ಹದಿನಾರು ಕಾಲು ಮಂಟ ಮತ್ತು ಪರುಶರಾಮ ದೇವಸ್ಥಾನಗಳು ಸಂಪೂರ್ಣ ಜಲಾವೃತಗೊಂಡಿವೆ.

ಸಂಚಾರದ ಮಾರ್ಗ ಬದಲಾವಣೆ: ಕಪಿಲಾ ನದಿಯಲ್ಲಿ ಹೆಚ್ಚಿನ ನೀರು ಹೊರ ಬರುತ್ತಿರುವುದರಿಂದ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ 766 ರ ಮೇಲೆ ನೀರು ಹರಿಯುತ್ತಿರುವುದರಿಂದ ಮೈಸೂರು-ನಂಜನಗೂಡು ರಸ್ತೆಯ ಮಾರ್ಗವನ್ನು ಬದಲಾಯಿಸಲಾಗಿದೆ.
ನಂಜನಗೂಡಿನಿಂದ ವಾಹನ ಸಂಚಾರ ಹುಲ್ಲಹಳ್ಳಿ, ದೂರ, ಮರಡಗಳ್ಳಿ, ಎಚ್.ಡಿ.ಕೋಟೆ ರಸ್ತೆ, ಶ್ರೀರಾಂಪುರ ಮಾರ್ಗವಾಗಿ ಮೈಸೂರು ತಲುಪುತಿದ್ದು, ಮೈಸೂರಿನಿಂದ ಕಡಕೋಳ, ಕಡಕೋಳ ಕೈಗಾರಿಕಾ ಪ್ರದೇಶ, ತಾಂಡ್ಯ ಕೈಗಾರಿಕಾ ಪ್ರದೇಶ, ಕೆಂಪಿಸಿದ್ದನಹುಂಡಿ, ನಂಜನಗೂಡು ರಸ್ತೆ ಮಾರ್ಗವಾಗಿ ನಂಜನಗೂಡು ತಲುಪಲಾಗುತ್ತಿದೆ.

ನಂಜುಂಡೇಶ್ವರನ ದರ್ಶನಕ್ಕೆ ಬರುವ ಭಕ್ತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮೈಸೂರು ನಂಜನಗೂಡಿಗೆ 30 ನಿವಿಷದ ಪ್ರಯಾಣ ಈಗ ಒಂದೂವರೆ ಗಂಟೆಯಾಗಿದೆ.

ಪೊಲೀಸರ ಕಟ್ಟೆಚ್ಚರ: ಕಪಿಲಾ ನದಿಗೆ ಹೆಚ್ಚಿನ ನೀರು ಬಂದಿರುವ ಕಾರಣ ಜಲಾಶಯದ ಅಕ್ಕಪಕ್ಕದಲ್ಲಿ ವಾಸಮಾಡುತಿದ್ದವರನ್ನು ಪೊಲೀಸರು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದ್ದಾರೆ. ಇನ್ನು ರಸ್ತೆಗೆಲ್ಲ ನೀರು ಬಂದಿರುವುದರಿಂದ ವಾಹನ ಸವಾರರು ಹೋಗದಂತೆ ಆಯಾ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News