ಕಬಿನಿ ಜಲಾಶಯದ ಪ್ರಾಂತ್ಯದಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ: ಸಚಿವ ಡಿ.ಕೆ.ಶಿವಕುಮಾರ್
ಮೈಸೂರು,ಆ.10: ಕೇರಳದ ವೈನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಅತಿ ಹೆಚ್ಚು ನೀರು ಹರಿದು ಬರುತಿದ್ದು, ರಾಜ್ಯದ ಕಬಿನಿ ಜಲಾಶಯದ ಪ್ರಾಂತ್ಯದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಆಷಾಢ ಶುಕ್ರವಾರದ ಕೊನೆಯ ದಿನವಾದ ಇಂದು ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ಶ್ರೀಚಾಮುಂಡೇಶ್ವರಿ ದೇವರ ದರ್ಶನ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ದೇವರ ಆಶೀರ್ವಾದದಿಂದ ರಾಜ್ಯದ ಎಲ್ಲಾ ಕಡೆಗಳಲ್ಲಿ ಉತ್ತಮ ಮಳೆ ಬಳೆ ಆಗಿದೆ. ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಕಮಾರ್, ನಾನು ಇಲ್ಲಿ ರಾಜಕೀಯ ಮಾತನಾಡಲು ಬಂದಿಲ್ಲ, ದೇವರ ದರ್ಶನ ಪಡೆಯಲು ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ ಎಂದು ಹೇಳಿದರು.