ಕಣಕುಂಬಿ ಪ್ರದೇಶದ ಬಳಿ ನೂತನ ಚೆಕ್‌ಪೋಸ್ಟ್ : ಐಜಿಪಿ ಅಲೋಕ್‌ ಕುಮಾರ್

Update: 2018-08-10 18:06 GMT

ಬೆಳಗಾವಿ, ಆ.10: ಮಹಾದಾಯಿ, ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ವಿವಾದಿತ ಪ್ರದೇಶವಾಗಿರುವ ಕಣಕುಂಬಿಗೆ ಗೋವಾ ಸರಕಾರದ ಪ್ರತಿನಿಧಿಗಳು ಯಾವುದೇ ಮುನ್ಸೂಚನೆ ಇಲ್ಲದೆ ಭೇಟಿ ನೀಡುತ್ತಿರುವುದರಿಂದ ನೂತನ ಚೆಕ್‌ಪೋಸ್ಟ್ ತೆರೆಯಲು ಪೊಲೀಸ್ ಅಧಿಕಾರಿಗಳಿಗೆ ಉತ್ತರ ವಲಯ ಐಜಿಪಿ ಅಲೋಕ್‌ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಅನುಮತಿ ಇಲ್ಲದೆ ಗೋವಾ ಸರಕಾರದ ಪ್ರತಿನಿಧಿಗಳು ವಿವಾದಿತ ಪ್ರದೇಶಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದರಿಂದ, ಕಾನೂನು, ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಅನುಮತಿ ಇಲ್ಲದೆ ರಾಜ್ಯದ ಗಡಿ ಪ್ರವೇಶಿಸುವುದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಬೆಳಗಾವಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಗೋವಾ ಸರಕಾರದ ಪ್ರತಿನಿಧಿಗಳು ಬಂದರೆ, ಕಣಕುಂಬಿ ಪ್ರದೇಶದ ಬಳಿ ನಾವು ಸೂಕ್ತ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲು ಸಹಕಾರಿಯಾಗುತ್ತದೆ. ಇಲ್ಲದಿದ್ದಲ್ಲಿ, ಸಾರ್ವಜನಿಕರಲ್ಲಿ ಅನಗತ್ಯವಾಗಿ ಗೊಂದಲಗಳು ಉಂಟಾಗಿ, ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂದು ಅವರು ಹೇಳಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಉತ್ತರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೂ ಚರ್ಚೆ ನಡೆಸಿದ್ದೇನೆ. ಗೋವಾ ಸರಕಾರದ ಸಚಿವರು ಹಾಗೂ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ವಿವಾದಿತ ಪ್ರದೇಶಕ್ಕೆ ಭೇಟಿ ನೀಡಲು ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ ಎಂದು ಅಲೋಕ್‌ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News