ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ: ಯಡಿಯೂರಪ್ಪ

Update: 2018-08-10 18:25 GMT

ರಾಯಚೂರು, ಆ.10: ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲವಿದೆ. ಆದರೂ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ರಾಜ್ಯದ ಜನರ ಪಾಲಿಗೆ ಈ ಸರಕಾರ ಸತ್ತಿದೆಯೋ, ಬದುಕಿದೆಯೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.

ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ರಾಯಚೂರು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಸರಕಾರ ಘೋಷಿಸಬೇಕು ಎಂದು ಆಗ್ರಹಿಸಿದ ಯಡಿಯೂರಪ್ಪ, ತುಂಗಭದ್ರಾ ಕಾಲುವೆ ಮೂಲಕ ಈ ಭಾಗಕ್ಕೆ ನೀರು ಸರಬರಾಜು ಮಾಡುವಲ್ಲಿಯೂ ಸರಕಾರ ವಿಫಲವಾಗಿದೆ. ರಾಯಚೂರು ವಿವಿ ಘೋಷಣೆಯಾಗಿದ್ದರೂ ಇನ್ನು ಕಾಮಗಾರಿಯೇ ಆರಂಭವಾಗಿಲ್ಲ ಎಂದು ದೂರಿದರು.

ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅವರು ಗಿಡದಿಂದ ಹಣ ತರುತ್ತಾರೋ, ಏನು ಮಾಡುತ್ತಾರೋ ನಮಗೆ ಗೊತ್ತಿಲ್ಲ. ಆದರೆ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರೈತರ ಸಾಲವನ್ನು ಮನ್ನಾ ಮಾಡಲಿ ಎಂದು ಯಡಿಯೂರಪ್ಪ ಒತ್ತಾಯಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವ ಕುರಿತು ಆದಷ್ಟು ಶೀಘ್ರದಲ್ಲೆ ನಿರ್ಧಾರ ಮಾಡಬೇಕು. ಸಾಲ ಮನ್ನಾ ಮಾಡುವುದಾಗಿ ಸುಳ್ಳು ಭರವಸೆ ನೀಡಿದ್ದರಿಂದಲೆ ಜೆಡಿಎಸ್ ಕಳೆದ ಚುನಾವಣೆಯಲ್ಲಿ 37 ಸ್ಥಾನಗಳನ್ನು ಗಳಿಸಿದೆ. ಇಲ್ಲದಿದ್ದರೆ, ಅವರಿಗೆ 20 ಸ್ಥಾನವು ಸಿಕ್ಕುತ್ತಿರಲಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಜಲಸಂಪನ್ಮೂಲ ಇಲಾಖೆಯಲ್ಲಿ 10 ಸಾವಿರ ಕೋಟಿ ರೂ.ಗಳ ಬಾಕಿಯಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಲಿ. ಕೇಂದ್ರ ಸರಕಾರವು ರಾಜ್ಯಕ್ಕೆ ನೀಡಬೇಕಿರುವ ಅನುದಾನದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News