×
Ad

"ಅ.16 ರಂದು ಆಹಾರದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲು ಕ್ರಮ"

Update: 2018-08-11 17:28 IST

ಮಡಿಕೇರಿ, ಆ.11: ವಿಶ್ವ ಆಹಾರ ದಿನವನ್ನು ಅಕ್ಟೋಬರ್ 16 ರಂದು ರಾಜ್ಯ, ಜಿಲ್ಲೆ ಹಾಗೂ ಪಂಚಾಯತ್ ಮಟ್ಟದಲ್ಲಿ ಆಚರಿಸುವ ಮೂಲಕ ಆಹಾರದ ಮಹತ್ವದ ಕುರಿತು ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎಂದು ಸಮಿತಿಯ ಸಂಚಾಲಕ ಕುಶಾಲನಗರದ ಎನ್.ಕೆ.ಮೋಹನ್ ಕುಮಾರ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ನಿವಾಸ ಕೃಷ್ಣಾದಲ್ಲಿ ನಡೆದ ಆಹಾರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ಮತ್ತು ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಖ್ಯಮಂತ್ರಿಗಳು ಈ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಅನ್ನ ಸಾಕ್ಷಾತ್ ಪರಬ್ರಹ್ಮ ಸಮಾನ, ತಿಳಿದೋ ತಿಳಿಯದೆಯೋ ಅನ್ನದ ಅಪವ್ಯಯ ಅವ್ಯಾಹತವಾಗಿ ನಡೆಯುತ್ತಿದೆ. ಬಹುತೇಕ ಜನರು ತಟ್ಟೆ ತುಂಬಾ ಬಡಿಸಿಕೊಂಡು, ಪೂರ್ತಿಯಾಗಿ ತಿನ್ನದೇ, ಉಳಿಸಿ ಬಿಸಾಕುವುದು ಸರ್ವೇ ಸಾಮಾನ್ಯವಾಗಿದೆ. ಇದೇ ರೀತಿ ಮುಂದುವರೆದರೆ, ಮುಂದೊಂದು ದಿನ ತುತ್ತು ಅನ್ನಕ್ಕಾಗಿ ಹಾತೊರೆಯಬೇಕಾದ ಸಂದರ್ಭ ಬರುವುದರಲ್ಲಿ ಸಂಶಯವಿಲ್ಲ. 

ಆಹಾರ ಪೋಲಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ಕಳೆದ ಹತ್ತಾರು ವರ್ಷಗಳಿಂದ ಕೊಡಗಿನ ಕುಶಾಲನಗರದ ಆಹಾರ ಸಂರಕ್ಷಣಾ ಅಭಿಯಾನ ಸಮಿತಿ 'ತಿನ್ನುವ ಹಕ್ಕಿದೆ, ಬಿಸಾಡುವ ಹಕ್ಕಿಲ್ಲ' ಎಂಬ ಘೋಷ ವಾಕ್ಯದೊಂದಿಗೆ ಹಲವಾರು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಪ್ರತಿ ವರ್ಷ ಶಾಲಾ ಕಾಲೇಜುಗಳ ಸಾವಿರಾರು ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನಡೆಸಿ, ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. 

ಪ್ರತಿವರ್ಷ ಅ. 16 ರಂದು ವಿಶ್ವ ಆಹಾರ ದಿನಾಚರಣೆಯನ್ನು ಸರ್ಕಾರದ ವತಿಯಿಂದ ನಡೆಸಬೇಕೆನ್ನುವ ಉದ್ದೇಶ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಮೋಹನ್ ಕುಮಾರ್ ತಿಳಿಸಿದ್ದಾರೆ. 

ಸರ್ಕಾರಿ ಕಚೇರಿಗಳಲ್ಲಿ ನಾಮಫಲಕಗಳನ್ನು ಅಳವಡಿಸುವಂತೆ, ಸರ್ಕಾರಿ ಜಾಹೀರಾತುಗಳಲ್ಲಿ ಈ ಸಂದೇಶ ಸಾರುವಂತೆ ಮತ್ತು ಪಠ್ಯ ಪುಸ್ತಕಗಳಲ್ಲಿ ಆಹಾರದ ಮಹತ್ವ ಸಾರುವ ಸಂದೇಶ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಸಮಿತಿಯ ರಚನಾತ್ಮಕ ಕಾರ್ಯಕ್ರಮದಿಂದ ಪ್ರಭಾವಿತಗೊಂಡು, ಬೆಂಗಳೂರು ಲಿಯೋ ಸಂಸ್ಥೆಯ ಯುವರಾಜ್ ಬೆಂಗಳೂರು ನಗರದಲ್ಲಿ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನ ಮುಂದುವರೆಸಿದ್ದಾರೆ. ಮದುವೆಯಂತಹ ಶುಭ ಸಮಾರಂಭಗಳಲ್ಲಿ ಬಳಸಿ ಹೆಚ್ಚಾಗಿ ಉಳಿದ ಆಹಾರವನ್ನು ಸಂಗ್ರಹಿಸಿ, ಹಸಿದವರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನಾರ್ಹವೆಂದು ಮೋಹನ್ ಕುಮಾರ್ ತಿಳಿಸಿದ್ದಾರೆ.

ಸಮಿತಿಯ ಪ್ರಮುಖರಾದ ಹೆಚ್.ಕೆ. ತಿಲಗಾರ್, ಎನ್.ಎಂ. ಅಂಕೃಷ್, ನಿಶಾಂತ್ ಶೌರ್ಯ, ವಿಜಯ್, ಚಾಮರಾಜಪೇಟೆ ಲಿಯೋ ಸಂಸ್ಥೆ ಅಧ್ಯಕ್ಷ ಯುವರಾಜ್ ಮುಖ್ಯಮಂತ್ರಿಗಳ ಭೇಟಿ ಸಂದರ್ಭ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News