ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ
ಚಿಕ್ಕಮಗಳೂರು, ಆ.11: ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರವೂ ಮಳೆ ಮುಂದುವರೆದಿದೆ. ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಈ ಭಾಗದಲ್ಲಿ ಹರಿಯುವ ತಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ಶನಿವಾರ ಮುಂಜಾನೆಯಿಂದಲೇ ಮಳೆ ಅಬ್ಬರಿಸುತ್ತಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಜಾವಳಿ, ಗುತ್ತಿ, ಭೈರಾಪುರ ಸುತ್ತಮುತ್ತಲ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟಿಯಲ್ಲಿ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಚಾರ್ಮಾಡಿ ರಸ್ತೆ ಮಾರ್ಗವಾಗಿ ಮಂಗಳೂರು, ಧರ್ಮಸ್ಥಳಕ್ಕೆ ಹೋಗುತ್ತಿರುವ ವಾಹನಗಳು ಭಾರೀ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶೃಂಗೇರಿ ಭಾಗದಲ್ಲಿ ಶುಕ್ರವಾರ ರಾತ್ರಿ ಭಾರೀ ಮಳೆಯಾಗಿದ್ದು, ಶನಿವಾರ ಮುಂಜಾನೆಯಿಂದ ನಿರಂತರವಾಗಿ ಸಾಧಾರಣ ಮಳೆ ಸುರಿಯಲಾರಂಭಿಸಿತ್ತು. ತಾಲೂಕಿನ ಕಿಗ್ಗಾ, ನೆಮ್ಮಾರು. ಕೆರೆಕಟ್ಟೆ, ಮೆಣಸೆ ಮತ್ತಿತರ ಕಡೆಗಳಲ್ಲಿ ಶುಕ್ರವಾರ, ಶನಿವಾರ ಭಾರೀ ಮಳೆಯಾದ ಬಗ್ಗೆ ವರದಿಯಾಗಿದೆ. ಶೃಂಗೇರಿ ತಾಲೂಕಿನ ಬೇಗಾರು ಸಮೀಪದ ದೇವಾಲೆಕೊಪ್ಪ ಗ್ರಾಮದ ಸುಶೀಲಾ ಎಂಬವರು ಭತ್ತದ ಗದ್ದೆ ನಾಟಿ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಹಳ್ಳವೊಂದಕ್ಕೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮಹಿಳೆಯ ಶೋಧಕಾರ್ಯ ನಡೆಸಲಾಗುತ್ತಿದೆ.
ಇನ್ನು ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗದಿದ್ದರೂ ನಿರಂತರವಾಗಿ ಸಾಧಾರಣ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ತಾಲೂಕಿನಾದ್ಯಂತ ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೆ ಆಗಾಗ್ಗೆ ಸಾಧಾರಣ ಮಳೆ ಸುರಿದಿದ್ದು, ದಿನವಿಡೀ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯ ಬಯಲು ಸೀಮೆ ಭಾಗವಾದ ಕಡೂರು, ಬೀರೂರು, ತರೀಕೆರೆ ಸುತ್ತಮುತ್ತ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.
ಜಿಲ್ಲೆಯ ಮಲೆನಾಡು ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಇಲ್ಲಿನ ಪ್ರಮುಖ ನದಿಗಳಲ್ಲಿ ನೀರಿನ ಹರಿವೂ ಹೆಚ್ಚುತ್ತಿದೆ. ನದಿ ಪಾತ್ರದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ಸಂಚರಿಸದಂತೆ ಜಿಲ್ಲಾಡಳಿತ ಆದೇಶ ನೀಡಿರುವುದರಿಂದ ಸ್ಥಳೀಯ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.