ನೀರು ಕೊಡಿ ಇಲ್ಲವೆ ದಯಾಮರಣ ಕೊಡಿ: ಮಹಾದಾಯಿ ಹೋರಾಟಗಾರರಿಂದ ರಾಷ್ಟ್ರಪತಿಗೆ ಪತ್ರ ಸಮರ

Update: 2018-08-11 12:41 GMT

ಬೆಂಗಳೂರು, ಆ.11: ಮಹದಾಯಿ ಕುಡಿಯುವ ನೀರಿಗಾಗಿ ರೈತರ ಪ್ರತಿಭಟನೆ ತೀವ್ರಗೊಳಿಸಿದ್ದು, ನೀರು ಕೊಡಿ ಇಲ್ಲವೆ ದಯಾಮರಣ ಕೊಡಿಯೆಂದು ರಾಷ್ಟ್ರಪತಿಗೆ ಪತ್ರ ಚಳವಳಿ ಆರಂಭಿಸಿದ್ದಾರೆ.

ರೈತ ಮುಖಂಡ ವೀರೇಶ್ ಸೊಬರದಮಠ ನೇತೃತ್ವದಲ್ಲಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ನೀರು ಇಲ್ಲವೆ ಸಾವು. ಇವೆರಡರಲ್ಲಿ ಯಾವುದಾದರು ಒಂದನ್ನು ಕೊಡಿಯೆಂದು ಒತ್ತಾಯಿಸಿ ರಾಷ್ಟ್ರಪತಿಗೆ 1000ಕ್ಕೂ ಹೆಚ್ಚು ದಯಾಮರಣ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ಆ.21ಕ್ಕೆ ಮಹದಾಯಿ ನ್ಯಾಯಾಧಿಕರಣದ ತೀರ್ಪು ಬರುವವರೆಗೂ ಪ್ರತಿಭಟನೆ ಮುಂದುವರೆಸಲು ರೈತರು ತೀರ್ಮಾನಿಸಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕನ್ನಡಪರ ಹೋರಾಟಗಾರ ಸಾರಾ ಗೋವಿಂದ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಹಾದಾಯಿ ಹೋರಾಟಗಾರರು ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ರೈತರು ತಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾದ ನೀರನ್ನು ಕೇಳುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿರುವ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.

ನೀರಿನ ವಿಚಾರದಲ್ಲಿ ರಾಜ್ಯ ರಾಜ್ಯಗಳಲ್ಲಿ ಇಷ್ಟೊಂದು ಹಗೆತನ ಇರಬಾರದು. ಔದಾರ್ಯದಿಂದ ಗೋವಾದವರೇ ನೀರು ಕೊಡಬೇಕಿತ್ತು. ಕಡೇ ಪಕ್ಷ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿತ್ತು. ಆ.21ರ ಒಳಗಾಗಿ ಬರುವ ಮಹದಾಯಿ ತೀರ್ಪಿನಲ್ಲಾದರೂ ರಾಜ್ಯಕ್ಕೆ ನ್ಯಾಯ ಸಿಗಲಿ ಎಂದು ಅವರು ಹೇಳಿದರು.

ಕನ್ನಡಪರ ಹೋರಾಟಗಾರ ಸಾರಾ ಗೋವಿಂದ್ ಮಾತನಾಡಿ, ರೈತರ ಪ್ರತಿಭಟನೆಗೆ ಚಿತ್ರರಂಗದಿಂದ ಸಂಪೂರ್ಣ ಬೆಂಬಲವಿದೆ. ರೈತರು ಯಾವಾಗ ಕರೆದರೂ ಸಿನೆಮಾ ನಟರು ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News