ಚಿಕ್ಕಮಗಳೂರು: ನೆಲ್ಯಾಡಿ-ಚಿತ್ರದುರ್ಗ ಹೆದ್ದಾರಿ ಕಾಮಗಾರಿ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣಾ ಸಭೆ
ಚಿಕ್ಕಮಗಳೂರು, ಆ.11: ನೆಲ್ಯಾಡಿ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಮೂಡಿಗೆರೆ ತಾಲೂಕಿನ 40-50 ಹಳ್ಳಿಗಳ ಜನತೆಗೆ ಸಾಕಷ್ಟು ಅನುಕೂಲವಾಗುತ್ತದೆ. ಈ ರಸ್ತೆ ನಿರ್ಮಾಣದ ಬಗ್ಗೆ ವೈಜ್ಞಾನಿಕ ಚರ್ಚೆಯಾಗಬೇಕು. ರಸ್ತೆ ನಿರ್ಮಾಣಕ್ಕೆ ಪರ-ವಿರೋಧ ಎರಡೂ ಇರುತ್ತದೆ. ಎಲ್ಲರೂ ಜಿಲ್ಲೆ, ಪರಿಸರದ ಬಗ್ಗೆ ಕಾಳಜಿ ಹೊಂದಿರುವವರೇ ಆಗಿದ್ದಾರೆ. ಯಾರಿಗೂ ಪರಿಸರವನ್ನು ಹಾಳು ಮಾಡಬೇಕು, ಅರಣ್ಯ ನಾಶಪಡಿಸಬೇಕೆಂಬ ಉದ್ದೇಶವಿಲ್ಲ ಎಂದು ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಅಭಿಪ್ರಾಯಿಸಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ನೆಲ್ಯಾಡಿ-ಚಿತ್ರದುರ್ಗ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಮಾತನಾಡಿದ ಅವರು, ಈ ರಸ್ತೆ ಕಾಮಗಾರಿ ಸಂಬಂಧ ಬಹುತೇಕ ಸ್ಥಳೀಯ ರೈತರು ಒಪ್ಪಿಗೆ ಸೂಚಿಸಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಈ ರಸ್ತೆ ಕಾಮಗಾರಿಯ ಕುರಿತು ಇಲ್ಲಿ ಚರ್ಚೆ ನಡೆಸಿದರೆ ಉಪಯೋಗವಿಲ್ಲ. ಭೈರಾಪುರದಲ್ಲಿಯೇ ಚರ್ಚೆಯಾಗಬೇಕು. ಅಲ್ಲಿಗೆ ತೆರಳಿದರೆ ಅಲ್ಲಿನ ಜನತೆಯ ಕಷ್ಟದ ಅರಿವಾಗುತ್ತದೆ. ಗ್ರಾಮಸ್ಥರು, ಪರಿಸರವಾದಿಗಳು, ಇಂಜಿನಿಯರ್‍ಗಳು ಇರುವಂತಹ ಸಮಿತಿ ರಚನೆ ಮಾಡಿ ಸಮಗ್ರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪತ್ರಕರ್ತ ಹಾಗೂ ಪರಿಸರವಾದಿ ಸ.ಗಿರಿಜಾಶಂಕರ್ ಈ ವೇಳೆ ಮಾತನಾಡಿ, ರಸ್ತೆಗಾಗಿ ಎಲ್ಲಿ ಎಷ್ಟು ಜಮೀನು ಹೋಗುತ್ತದೆ ಎಂಬುದನ್ನು ಎಲ್ಲಿಯೂ ತೋರಿಸಿಲ್ಲ. ಕಾಮಗಾರಿ ವಿರೋಧಿಸಿ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರಬಹುದು ಎಂಬ ಹೆದರಿಕೆಯಿಂದ ಸಭೆ ನಡೆಸಿದಂತೆ ಕಾಣುತ್ತಿದೆ. 300 ಮಿ.ಮೀ. ಮಳೆಯಾಗುವ ಅರಣ್ಯ ಪ್ರದೇಶವನ್ನು ರಸ್ತೆಗಾಗಿ ತೆರವುಗೊಳಿಸುವುದು ಸರಿಯಲ್ಲ. ಅರಣ್ಯ ನಾಶಪಡಿಸುವ ಬದಲು ಈಗಲೆ ಇರುವ 4-5 ರಸ್ತೆಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ. 7 ಸಾವಿರ ಕೋಟಿ ರೂ. ವೆಚ್ಚ ಮಾಡಿ ರಸ್ತೆ ಮಾಡುವ ಅಗತ್ಯವಿಲ್ಲ. 4-5 ಪಟ್ಟು ಹೆಚ್ಚು ಹಣವನ್ನು ನೀಡಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಕೃಷಿಭೂಮಿ ಇಲ್ಲದಂತೆ ಮಾಡಲಾಗುತ್ತಿದೆ. ಇದಕ್ಕೆ ತಮ್ಮ ಸಂಪೂರ್ಣ ವಿರೋಧವಿದೆ ಎಂದು ಹೇಳಿದರು.
ಮಧ್ಯೆ ಪ್ರವೇಶಿಸಿದ ವಕೀಲ ಯತಿರಾಜ್ ಮಾತನಾಡಿ, ಇದೊಂದು ಉತ್ತಮ ಯೋಜನೆ. ನೇರ ರಸ್ತೆಯಾದಲ್ಲಿ ವಾಹನ ಸವಾರರಿಗೆ ಅನುಕೂಲವಾಗುತ್ತದೆ. ದೇಶದ ಅಭಿವೃದ್ಧಿಗೂ ಅನುಕೂಲವಾಗುತ್ತದೆ. ಈ ಯೋಜನೆಗೆ ವಿರೋಧ ಸಲ್ಲದು. ಯಾವುದಕ್ಕೆ ಎಷ್ಟು ಪರಿಹಾರ ಕೊಡಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಅವಕಾಶವಿದ್ದಲ್ಲಿ ಹೆಚ್ಚುವರಿ ಪರಿಹಾರ ಕೊಡಿಸಬೇಕೆಂದು ಮನವಿ ಮಾಡುವುದಾಗಿ ಹೇಳಿದರು.
ಪರಿಸರವಾದಿ ಗಿರೀಶ್ ಮಾತನಾಡಿ, ಈ ರಸ್ತೆಯನ್ನು ಶಿಶಿಲ-ಭೈರಾಪುರ ಮಾರ್ಗದಲ್ಲಿ ಮಾಡಲು ಉದ್ದೇಶಿಸಲಾಗಿದೆ. ಈ ಪ್ರದೇಶವನ್ನು ಮಳೆಕಾಡು ಎಂದು ಕರೆಯಲಾಗುತ್ತದೆ. ಹಲವು ನದಿಗಳಿಗೆ ನೀರಿನ ಮೂಲವೇ ಇದಾಗಿದೆ. ಈ ನದಿಗಳಿಂದ ಹಲವು ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆ ಪ್ರದೇಶಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹೇಗೆ ಒದಗಿಸುತ್ತೀರಿ ಎಂದು ಪ್ರಶ್ನಿಸಿ, ರಸ್ತೆಗಾಗಿ ಇಂತಹ ಪ್ರದೇಶವನ್ನು ಹಾಳು ಮಾಡುವುದು ಸರಿಯಲ್ಲ. ಇದರ ಬದಲು ಇದರ ಸುತ್ತಲೂ ಈಗ ಇರುವ ರಸ್ತೆಗಳನ್ನೇ ಅಭಿವೃದ್ಧಿಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಮಾತನಾಡಿ, ಪರಿಸರ ಬಿಟ್ಟು ಯಾರೂ ಬದುಕಲು ಸಾಧ್ಯವಿಲ್ಲ. ಜನಾಭಿಪ್ರಾಯಕ್ಕೆ ಮನ್ನಣೆ ಕೊಡಬೇಕು. ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಎಲ್ಲರ ಮಾತುಗಳನ್ನು ಆಲಿಸಿದ ನಂತರ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಸಭೆಯಲ್ಲಿ ಪ್ರಸ್ತಾಪವಾಗಿರುವ ಎಲ್ಲ ಅಂಶಗಳನ್ನು ಕ್ರೋಡೀಕರಿಸಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಕರಾವಳಿಯಿಂದ ಉತ್ತರ ಕರ್ನಾಟಕ ಭಾಗಕ್ಕೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. 20 ವರ್ಷಗಳ ಹಿಂದೆ ಹಣವಂತರ ಬಳಿ ಮಾತ್ರ ಕಾರಿತ್ತು. ಅದೇ ರೀತಿ ಕೆಲವರತ್ತ ಮಾತ್ರ ದ್ವಿಚಕ್ರ ವಾಹನಗಳಿತ್ತು. ಈಗ ಮನೆಯೊಂದರಲ್ಲಿಯೇ 3-4 ಕಾರುಗಳಿವೆ. ಎಲ್ಲರ ಬಳಿಯೂ ದ್ವಿಚಕ್ರ ವಾಹನಗಳಿವೆ. ಮುಂದಿನ 20 ವರ್ಷಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದನ್ನೂ ಯೋಚಿಸಬೇಕು. ರೈಲ್ವೆ ಮಾರ್ಗಗಳು, ದೊಡ್ಡ ದೊಡ್ಡ ರಸ್ತೆಗಳು ಇರುವ ಎಲ್ಲ ಜಿಲ್ಲಾ ಕೇಂದ್ರಗಳೂ ಅಭಿವೃದ್ಧಿಗೊಂಡಿವೆ. ಬೇರೆ ಜಿಲ್ಲಾ ಕೇಂದ್ರಗಳಿಗೆ ಹೋಲಿಸಿದರೆ ಚಿಕ್ಕಮಗಳೂರು ಅಭಿವೃದ್ಧಿಯಲ್ಲಿ ಹಿಂದಿದೆ. ಅದಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದಿರುವುದೂ ಕಾರಣ ಎಂದ ಅವರು, ಇದೇ ತಿಂಗಳ 18 ರಂದು ಕಡೂರು ಮತ್ತು ಅಜ್ಜಂಪುರದಲ್ಲಿಯೂ ಸಾರ್ವಜನಿಕ ಅಭಿಪ್ರಾಯ ಸಭೆ ನಡೆಸಲಾಗುವುದು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅಮರೇಶ್, ಡಿ.ವೈ.ಎಸ್.ಪಿ. ಚಂದ್ರಶೇಖರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿರಿಶ್ ಗಂಗಾಧರ್, ತಾಲೂಕು ಪಂಚಾಯತ್ ಅಧ್ಯಕ್ಷ ನೆಟ್ಟೇಕೆರೆ ಜಯಣ್ಣ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಸೋಮಶೇಖರ್, ಹಿರಗಯ್ಯ ಇತರರು ಉಪಸ್ಥಿತರಿದ್ದರು.
ಈಗ ಮಾಡಲು ಹೊರಟಿರುವುದು ಹೊಸ ರಸ್ತೆಯಲ್ಲ. ಈಗಾಗಲೆ ಚಿತ್ರದುರ್ಗದಿಂದ ಭೈರಾಪುರದವರೆಗೆ ರಸ್ತೆ ಇದೆ. ಅದನ್ನು ಅಗಲೀಕರಣ ಮಾತ್ರ ಈಗ ಮಾಡಲಾಗುತ್ತಿದೆ. ಹೊಸದಾಗಿ ಬೈರಾಪುರದಿಂದ ಶಿಶಿಲಾದವರೆಗೆ ಮಾತ್ರ ರಸ್ತೆ ಮಾಡಬೇಕಿದೆ. ಈ ಬಗ್ಗೆ ಸ್ಥಳಕ್ಕೆ ಬಂದರೆ ತಿಳಿಯುತ್ತದೆ. ರೈತರು ಯೋಜನೆ ಪರವಾಗಿದ್ದಾರೆ.
- ಹಾಲಪ್ಪಗೌಡ, ರೈತ ಮುಖಂಡಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣಗೊಳಿಸುವ ಪ್ರಸ್ತಾವ ಇದೆ. ಈ ಬಗ್ಗೆ ತಿಳಿದ ಕೂಡಲೆ ಬೆಂಗಳೂರಿನ ಹಲವು ಬಂಡವಾಳಶಾಹಿಗಳು ಕಡೂರು ತರೀಕೆರೆ ಮಾರ್ಗದಲ್ಲಿರುವ ಜಮೀನುಗಳನ್ನು ಖರೀದಿಸಲು ಮುಂದೆ ಬರುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ರಸ್ತೆ ಅಗಲೀಕರಣವಾಗುತ್ತಿರುವುದರಿಂದ ಇಲ್ಲಿ ವ್ಯವಹಾರ ನಡೆಸುವ ಉದ್ದೇಶದಿಂದ ಖರೀದಿಸುತ್ತಿರುವುದಾಗಿ ಹೇಳುತ್ತಾರೆ. ರಸ್ತೆ ಅಭಿವೃದ್ಧಿಯಾದಷ್ಟೂ ಜಿಲ್ಲೆಗೆ ಅನುಕೂಲವಾಗುವುದಲ್ಲದೆ, ಅರಣ್ಯ ಪ್ರದೇಶ ಬಿಟ್ಟು ಬೇರೆಡೆ ರಸ್ತೆ ನಿರ್ಮಾಣದ ಬಗ್ಗೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೆ ಚಿಂತನೆ ನಡೆಸಿ ವರದಿ ಸಿದ್ಧಪಡಿಸುತ್ತಿದೆ. ಸಭೆಯಲ್ಲಿ ಪ್ರಸ್ತಾಪವಾಗಿರುವ ವಿಚಾರಗಳನ್ನು ಸರಕಾರದ ಗಮನಕ್ಕೆ ತರಲಾಗುವುದು.
- ಶ್ರೀರಂಗಯ್ಯ, ಜಿಲ್ಲಾಧಿಕಾರಿ.