ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅಶೋಕ್ ಖೇಣಿ ಉತ್ಸುಕ

Update: 2018-08-11 13:41 GMT

ಬೀದರ್, ಆ.11: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜೆಡಿಎಸ್ ಪಕ್ಷದ ಬಂಡೆಪ್ಪ ಕಾಶೆಂಪೂರ್ ವಿರುದ್ಧ ಪರಾಭವಗೊಂಡಿದ್ದ ಅಶೋಕ್ ಖೇಣಿ, ಇದೀಗ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕವಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆ.13ರಂದು ಬೀದರ್‌ಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಜೊತೆ ಬೀದರ್‌ಗೆ ಭೇಟಿ ನೀಡಿದ ಅವರು, ಹೈಕಮಾಂಡ್ ಒಪ್ಪಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ ಎಂದರು.

ಕೆಲವರು ಟಿಕೆಟ್ ಸಿಕ್ಕಿಲ್ಲ ಎಂದು ಅಳುತ್ತಾರೆ. ಚುನಾವಣೆಯಲ್ಲಿ ಸೋತರೂ ಅಳುತ್ತಾರೆ. ಆದರೆ, ನಾನು ಸೋತಾಗಲೂ ಸಂತೋಷವಾಗಿದ್ದೇನೆ ಎಂದ ಅವರು, ಇದೇ ಸಂದರ್ಭದಲ್ಲಿ ನೈಸ್ ಹಗರಣದ ಕುರಿತು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಮೌನ ವಹಿಸಿರುವ ಕುರಿತು ಕೇಳಿದ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಬೀದರ್ ಜಿಲ್ಲೆಯಲ್ಲಿ ತಾವು ಕಾಣುತ್ತಿಲ್ಲವಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ಅವರು, ನೀವು ಕನ್ನಡಕ ಹಾಕಿಕೊಂಡು ನೋಡಿ, ಇಲ್ಲದಿದ್ದರೆ ನನ್ನ ಕನ್ನಡಕವನ್ನೆ ಕೊಡುತ್ತೇನೆ ನೋಡಿ ನಾನು ಕಾಣುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News