ವರ್ಗಾವಣೆಯಲ್ಲಿ ದಂಧೆ ನಡೆದಿದ್ದರೆ ಸಾಬೀತುಪಡಿಸಲಿ: ಕುಮಾರಸ್ವಾಮಿ ತಿರುಗೇಟು
ಮೈಸೂರು,ಆ.11: ವರ್ಗಾವಣೆಯಲ್ಲಿ ದಂಧೆ ಮಾಡಲಾಗಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಅಮಾವಾಸ್ಯೆ ಪೂಜೆಯಲ್ಲಿ ಭಾಗವಹಿಸಿ ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದು ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬುದನ್ನು ಸಾಬೀತುಪಡಿಸಲಿ. ಅದು ಬಿಟ್ಟು ಇಲ್ಲ ಸಲ್ಲದ ಆರೋಪ ಸರಿಯಲ್ಲ. ಬಿಜೆಪಿಯವರು ಐದು ವರ್ಷ ಆಡಳಿತ ನಡೆಸಿದ್ದಾರೆ. ಅವರ ಅಧಿಯಲ್ಲಿ ಯಾವ ಮಾನದಂಡ ಇಟ್ಟುಕೊಂಡು ವರ್ಗಾವಣೆ ಮಾಡಿದ್ದರು ಎಂಬುದನ್ನು ತಿಳಿಸಲಿ, ನಂತರ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ನಾಟಿ ಮಾಡುವ ವಿಚಾರದಲ್ಲಿ ರಾಜಕೀಯ ಬೇಡ. ನಾನು ರೈತ ಕುಟುಂಬದಿಂದ ಬಂದಿರುವವನು. ನಾನು ಸಹ ನಾಟಿ ಮಾಡಿದ್ದೇನೆ. ನಾಟಿ ಮಾಡುವ ವಿಚಾರದಲ್ಲೂ ಬಿಜೆಪಿಯ ನಾಯಕರು ಟೀಕೆ ಮಾಡುವ ಮೂಲಕ ರೈತರಿಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಎಂಬುದು ತಿಳಿಯುತ್ತದೆ. ನಾನು ಬೆಳೆದಿರುವುದೇ ರೈತ ಪರಿಸರದಲ್ಲಿ. ನಾನು ಮಣ್ಣಿನ ಮಗ ಎಂದು ತೋರಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯದ ರೈತರು ಯಾವುದೇ ಕಾರಣಕ್ಕೂ ನಿರಾಸೆಯಾಗದೆ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮ ಕಷ್ಟಗಳನ್ನು ಬಗೆಹರಿಸುತ್ತೇನೆ. ಸ್ವಲ್ಪ ಸಮಯ ಕೊಡಿ, ನೆಮ್ಮದಿಯ ಬದುಕನ್ನು ಕಾಣುವುದಕ್ಕೆ ನಮ್ಮ ಸರಕಾರ ನಿಮ್ಮ ಪರವಾಗಿದೆ ಎಂದರು. ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಮತ್ತು ನಮ್ಮ ನಡುವೆ ಫ್ರೆಂಡ್ಲಿಫೈಟ್ ನಡೆಯಲಿದೆ ಎಂದು ನಮ್ಮ ನಾಯಕರೇ ಹೇಳಿದ್ದಾರೆ ಎಂದರು.
ನೆರೆ ಮತ್ತು ಬರ ಪರಿಹಾರಕ್ಕೆ ಹಣದ ಕೊರತೆ ಇಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಪರಿಹಾರ ಪ್ರಕ್ರಿಯೆಗೆ ಅಡ್ಡಿಯಾಗಿದೆ. ನೆರೆ ಪೀಡಿತ ಮತ್ತು ಬರ ಪೀಡಿತ ಸಂತ್ರಸ್ಥರಿಗೆ ನೆರವು ನೀಡಲು ಸೂಚನೆ ನೀಡಿದ್ದೇನೆ. ಪ್ರತಿ ಜಿಲ್ಲಾಧಿಕಾರಿಗಳ ಖಾತೆಗೆ 5 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದರು.