ಸಮ್ಮಿಶ್ರ ಸರಕಾರಕ್ಕೆ ಯಡಿಯೂರಪ್ಪನವರ ಸರ್ಟಿಫಿಕೇಟ್ ಅಗತ್ಯವಿಲ್ಲ: ಪರಮೇಶ್ವರ್

Update: 2018-08-11 14:44 GMT

ತುಮಕೂರು,ಆ.11: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜನಮನ್ನಣೆ ಹೊಂದಿರುವ ವ್ಯಕ್ತಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಡಿಸಿಎಂ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತುಮಕೂರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲುವನ್ನೇ ಮಾನದಂಡವಾಗಿಟ್ಟುಕೊಂಡು ಜನಮನ್ನಣೆ ಪಡೆದಿರುವ ಮಹಿಳೆಯರು, ಯುವಕರು ಹಾಗೂ ಹೊಸಬರಿಗೆ ಹೆಚ್ಚಿನ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದರು.

ಆಡಳಿತ ಚುರುಕಾಗಲಿ ಎಂಬ ಕಾರಣಕ್ಕೆ ಉಸ್ತುವಾರಿ ಸಚಿವರನ್ನು ನೇಮಿಸಲಾಗುತ್ತಿದೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗಲೂ ಹಲವು ದಿನಗಳ ಕಾಲ ಉಸ್ತುವಾರಿ ಸಚಿವರ ನೇಮಕ ಆಗಿರಲಿಲ್ಲ. ತಮ್ಮ ತಪ್ಪುಗಳನ್ನು ಬಿಜೆಪಿಯವರು ಮತ್ತೊಮ್ಮೆ ನೋಡಿಕೊಳ್ಳಲಿ ಎಂದು ಸಲಹೆ ನೀಡಿದ ಅವರು, ಸಮ್ಮಿಶ್ರ ಸರಕಾರಕ್ಕೆ ಬಿ.ಎಸ್.ವೈ ಅವರ ಸರ್ಟಿಪಿಕೇಟ್ ಅಗತ್ಯವಿಲ್ಲ. ಜನರ ಮನ್ನಣೆ ಇದ್ದರೆ ಸಾಕು ಎಂದು ಮಾರ್ಮಿಕವಾಗಿ ನುಡಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮುಂದುವರೆಯಲಿದ್ದು, ಸೀಟು ಹಂಚಿಕೆ ಸಂಬಂಧ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಈಗಾಗಲೇ ಕೈಗೊಂಡಿರುವ ತೀರ್ಮಾನದಂತೆ ಲೋಕಸಭೆಯಲ್ಲಿ ಎರಡು ಪಕ್ಷಗಳ ನಡುವೆ ಮೈತ್ರಿ ಮುಂದುವರೆಯಲಿದೆ. ಜೆಡಿಎಸ್‍ಗೆ ಎಷ್ಟು ಸ್ಥಾನ ಬಿಟ್ಟುಕೊಡುಬೇಕು ಎಂಬ ನಿಟ್ಟಿನಲ್ಲಿ ಇನ್ನಷ್ಟೇ ಚರ್ಚೆ ನಡೆಯಲಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮುಖ್ಯಮಂತ್ರಿಗಳಾಗಲಿ, ನಾನಾಗಲಿ ಮಾಧ್ಯಮದವರನ್ನು ದೂರ ಇಡುವ ಕೆಲಸ ಮಾಡುತ್ತಿಲ್ಲ. ಆದರೆ ಪ್ರತಿಯೊಂದಕ್ಕೂ ಸಿಎಂ ಪ್ರತಿಕ್ರಿಯೆ ಬೇಕು ಎಂದು ಬಯಸುವುವರಿಗೆ ಕೊಂಚ ಕಡಿವಾಣ ಹಾಕಲಾಗಿದೆ. ಮುಖ್ಯಮಂತ್ರಿಗಳಿಗೆ ಹಲವಾರು ಜವಾಬ್ದಾರಿಗಳಿವೆ. ದಿನಕ್ಕೆ ನಾಲ್ಕು ಬಾರಿ ಮಾಧ್ಯಮಗಳಿಗೆ ಪ್ರಕ್ರಿಯೆ ನೀಡಿದರೆ, ಬೇರೆ ಕೆಲಸ ಕಾರ್ಯಗಳ ಗತಿ ಎನು ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕ ಜೀವನದಲ್ಲಿ ಮಾಧ್ಯಮಗಳನ್ನು ದೂರವಿಟ್ಟು ಬದುಕುವುದು ಕಷ್ಟ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಗೃಹ ರಕ್ಷಕರ ಕೆಲಸ ಸ್ವಯಂ ಸೇವಕರ ಕೆಲಸವಾಗಿದೆ. ಕೆಲಸವಿದ್ದಾಗ ಮಾತ್ರ ಅವರ ಸೇವೆಯನ್ನು ಪಡೆದು, ಅದಕ್ಕೆ ತಕ್ಕದಾದ ವೇತನವನ್ನು ನೀಡಲಾಗುತ್ತದೆ. ಎಲ್ಲರಿಗೂ ನಿರಂತರ ಕೆಲಸ ನೀಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಹೊಸ ನಿಯಮ ರೂಪಿಸುತ್ತಿದ್ದು, ವೇತನ ಹೆಚ್ಚಳದ ಜೊತೆಗೆ, ಕೆಲವರಿಗೆ ಕೆಲಸ ನೀಡುವ ಬದಲು ಎಲ್ಲರಿಗೂ ಕೆಲಸ ದೊರೆಯುವಂತೆ ನಿಯಮ ರೂಪಿಸಲಾಗುತ್ತಿದೆ. ಕೆಲಸಕ್ಕಾಗಿ ಆಗ್ರಹಿಸಿ ಪ್ರತಿಭಟಿಸುವುದರಲ್ಲಿ ಅರ್ಥವಿಲ್ಲ ಎಂದು ಗೃಹ ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News