×
Ad

ಶ್ರೀರಂಗಪಟ್ಟಣ: ವಿ.ಸಿ.ಫಾರಂ ವಿದ್ಯಾರ್ಥಿಗಳಿಂದ ಭತ್ತದ ನಾಟಿ; ರೈತರಿಗೆ ಕೃಷಿ ತಾಂತ್ರಿಕತೆ ಬಗ್ಗೆ ಜಾಗೃತಿ

Update: 2018-08-11 21:46 IST

ಶ್ರೀರಂಗಪಟ್ಟಣ, ಆ.11: ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ರೈತರ ಮಾರ್ಗದರ್ಶನದಲ್ಲಿ ಭತ್ತದ ನಾಟಿ ಮಾಡಿದರು.

ಬಿಎಸ್ಸಿ ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮದಲ್ಲಿ 90 ದಿನಗಳ ಶಿಬಿರ ಆಯೋಜಿಸಿದ್ದು, ಪ್ರತಿದಿನ ರೈತರ ಹೊಲ, ಗದ್ದೆ, ತೋಟಗಳಲ್ಲಿ ರೈತರೊಡನೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜತೆಗೆ ಸುಧಾರಿತ ಕೃಷಿ ತಾಂತ್ರಿಕತೆಗಳನ್ನು ರೈತರಿಗೆ ಮನದಟ್ಟು ಮಾಡುತ್ತಿದ್ದಾರೆ.
ಭತ್ತದ ಹೈಬ್ರಿಡ್ ಹಾಗೂ ಸುಧಾರಿತ ತಳಿಗಳಾದ ಕೆಆರ್‍ಎಚ್ 4, ಎಮ್‍ಟಿಯು 1001, ಎಮ್‍ಟಿ 1010 ಮತ್ತು ರಾಶಿ ಬೀಜದ ಸಸಿ ಮಡಿ ತಯಾರಿಕೆ, ನಾಟಿ ಮಾಡುವ ಸಮಯ ಹಾಗೂ ವಿಧಾನವನ್ನು ವಿದ್ಯಾರ್ಥಿಗಳು ಕೃಷಿ ಮಹಾವಿದ್ಯಾಲಯದ ಬೀಜ ಶಾಸ್ತ್ರಜ್ಞ ಡಾ.ಶಶಿ ಭಾಸ್ಕರ್ ಮಾರ್ಗದರ್ಶನದಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಭತ್ತದ ಸಸಿಮಡಿ ತಯಾರಿಸುವ ಮುನ್ನ ಜೈವಿಕ ಗೊಬ್ಬರ ಅಜೋಸ್ಪಿರುಲಮ್ 10 ಗ್ರಾಂ. ಪ್ರತಿ ಕೆಜಿ ಬಿತ್ತನೆ ಬೀಜಕ್ಕೆ ಲೇಪಿಸಿ ಬೀಜೋಪಚಾರ ಮಾಡಿ ಸಸಿ ಮಡಿಗಳನ್ನು ತಯಾರಿಸಿಕೊಳ್ಳಬೇಕು. 21 ದಿನಗಳ ಆರೋಗ್ಯವಾಗಿ ಬೆಳೆದ ಸಸಿಗಳನ್ನು ಸಸಿಮಡಿಯಿಂದ ಮುಖ್ಯ ಜಮೀನಿಗೆ ನಾಟಿ ಮಾಡಬೇಕು. ನಾಟಿ ಮಾಡುವ ಭೂಮಿಯನ್ನು ಹದ ಮಾಡಿಕೊಳ್ಳುವುದರ ಜತೆಗೆ ಕೊಟ್ಟಿಗೆ ಗೊಬ್ಬರವನ್ನು ಕೂಡ ಹಾಕಬೇಕು. ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನಾಟಿ ಮಾಡುವುದರಿಂದ ರೋಗ ಮತ್ತು ಕೀಟಗಳ ಹಾವಳಿ ಕಡಿಮೆ ಮಾಡಬಹುದೆಂದು ಶಿಬಿರಾರ್ಥಿಗಳಾದ ಗೋಕುಲ, ರಾಮ, ಚೇತನ್ ವಿವರಿಸಿದರು.

ಕೃಷಿಕರಾದ ಕಾರ್ತಿಕ್, ಯತೀಶ್, ಸತೀಶ್, ನಾಗೇಶ್, ಧರ್ಮೇಶ್ ಹಾಗೂ ಇತರರು ಕೃಷಿ ವಿದ್ಯಾರ್ಥಿಗಳಿಗೆ ನಾಟಿ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ನಿಯೋಜಿತ ಸಂಯೋಜಕ ಡಾ.ಜಿ.ನಾಗೇಶ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಗ್ರಾಮಸ್ಥರೊಂದಿಗೆ ಭತ್ತದ ಪೈರುಗಳನ್ನು ನಾಟಿ ಮಾಡಿದ್ದು ವಿಶೇಷವಾಗಿತ್ತು.

ಶಿಬಿರಾರ್ಥಿಗಳಾದ ಚೇತನ ಕುಮಾರ್, ಚೇತನ್, ಬಾಲಾಜಿ, ಗೋಕುಲ, ಪ್ರತಾಪ್, ದೀಕ್ಷಿತ, ಯೋಗೇಶ್, ಅನೀಲ್‍ಕುಮಾರ, ಮಂಜುಶ್ರೀ, ಅರ್ಪಿತಾ, ಮುಕ್ತ, ಪೂಜಾ, ತಾಜ್, ಅಂಜಲಿ ಕುಮಾರಿ, ಚಂದನ್. ಮೇಘನಾ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News