ಸಿನಿಮಾದಿಂದ ಮಕ್ಕಳಲ್ಲಿ ಮನೋವಿಕಾಸ ಸಾಧ್ಯ: ಎಂ.ಬಸವಯ್ಯ
ತುಮಕೂರು,ಆ.11: ಸಿನಿಮಾದಿಂದ ಮಕ್ಕಳಲ್ಲಿ ಮನೋವಿಕಾಸ ಸಾಧ್ಯ ಎಂದು ಜಿಲ್ಲಾ ಬಾಲಭವನ ಸಂಘ ಸದಸ್ಯ ಎಂ. ಬಸವಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬಾಲಭವನದಲ್ಲಿ ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ `ವಾರಾಂತ್ಯ ಸಿನಿಮಾ'ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಾಲಭವನದ ಆಶ್ರಯದಲ್ಲಿ ಪ್ರತಿ ಶನಿವಾರ ಮಕ್ಕಳಿಗಾಗಿ ಸಿನಿಮಾ ಆಯೋಜಿಸುತ್ತಿದ್ದೇವೆ. ಇದನ್ನು ಮಕ್ಕಳು ಗಮನವಿಟ್ಟು ನೋಡಿದರೆ ಹೊಸ ಹೊಸ ಆಲೋಚನೆಗಳು ತೆರೆದುಕೊಳ್ಳುತ್ತದೆ ಎಂದರು.
ದೃಶ್ಯ ಮಾಧ್ಯಮಗಳು ಮಕ್ಕಳ ಮೇಲೆ ಬೀರುವ ಪರಿಣಾಮವೇ ಬೇರೆ. ಆದಷ್ಟು ಮಕ್ಕಳು ಇಂಟರ್ ನೆಟ್, ಮೊಬೈಲ್‍ಗಳನ್ನು ಕಡಿಮೆ ಮಾಡಿ ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು ಮತ್ತು ಹೊಸ ಅಲೆಯ ಚಿತ್ರಗಳನ್ನು ನೋಡಬೇಕು. ಬಾಲಭವನ ಮುಂದಿನ ದಿನಗಳಲ್ಲಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಮಕ್ಕಳ ನಾಟಕಗಳು, ನಾಟಕೋತ್ಸವಗಳನ್ನು ನಡೆಸುತ್ತೇವೆ. ಈ ಮೂಲಕ ಮಕ್ಕಳ ಜ್ಞಾನ ವಿಕಾಸಕ್ಕೆ ನೀರು ಹಾಕುವ ಕೆಲಸವನ್ನು ನಾವು ಮಾಡಲು ಸಿದ್ಧರಿದ್ದೇವೆ. ಮಕ್ಕಳ ಸಿನಿಮಾ ಆಯೋಜಿಸಲು ಹೊರಟಿರುವ ಬೆನ್ನಲ್ಲೇ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಹೊಸ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.
ಸಿನಿಮಾ ವಿಮರ್ಶಕ ಮನು ಮಾತನಾಡಿ, ಕೇರಳದಲ್ಲಿ 900 ಕ್ಕೂ ಹೆಚ್ಚು ಸಿನಿಮಾ ಕ್ಲಬ್‍ಗಳಿವೆ. ಅಲ್ಲಿನ ಜನ ಸಿನಿಮಾ ನೋಡಿ ಅದರ ಬಗ್ಗೆ ಚರ್ಚೆ ನಡೆಸುತ್ತಾರೆ. ಹೀಗಾಗಿ ಕೇರಳ ರಾಜ್ಯ ಸಾಂಸ್ಕೃತಿಕವಾಗಿ ಸಮೃದ್ಧಿಯಾಗಿದೆ ಎಂದು ವಿಶ್ಲೇಷಿಸಿದರು. ಮಕ್ಕಳು ರಂಜನೆಗಾಗಿ ಸಿನಿಮಾ ನೋಡಬಾರದು. ಅದರಲ್ಲಿರುವ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಸದ್ಯ ಇವತ್ತು ಮಕ್ಕಳ ಬೆಳವಣಿಗೆಗೆ ಪೂರಕವಾದ ಚಿತ್ರಗಳನ್ನು ತೋರಿಸುತ್ತಿದ್ದೇವೆ. ಇದನ್ನು ಮಕ್ಕಳು ನೋಡಿ ಮಾನವೀಯ ಅಂಶಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಝೆನ್ ಟೀಮ್ ಮುಖ್ಯಸ್ಥ ಹಾಗೂ ಪತ್ರಕರ್ತ ಉಗಮ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಮಮತಾ ಮತ್ತಿತರರು ಉಪಸ್ಥಿತರಿದ್ದರು.