ಸಮ್ಮಿಶ್ರ ಸರಕಾರದ ಪ್ರಮಾಣವಚನ ಕಾರ್ಯಕ್ರಮದ ಅತಿಥಿಗಳ ಸತ್ಕಾರಕ್ಕೆ ತೆರಿಗೆ ಹಣ ಬಳಕೆ: ಈಶ್ವರಪ್ಪ ಆರೋಪ

Update: 2018-08-11 17:23 GMT

ಮೈಸೂರು,ಆ.11: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪದಗ್ರಹಣದ ವೇಳೆ ಅತಿಥಿಗಳ ಸತ್ಕಾರದ ಹೆಸರಿನಲ್ಲಿ ತೆರಿಗೆ ಹಣ ಲೂಟಿಯಾಗಿದೆ ಎಂದು ಬಿಜೆಪಿ ನಾಯಕ ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಪದಗ್ರಹಣದ ವೇಳೆ ಅತಿಥಿಗಳ ಹೋಟೆಲ್ ಬಿಲ್ ಸೇರಿದಂತೆ ಇನ್ನಿತರ ಬಿಲ್‍ಗಳನ್ನು ಸರಕಾರದ ತೆರಿಗೆ ಹಣದಲ್ಲಿ ಬಳಸಿಕೊಳ್ಳಲಾಗಿದೆ. ಈ ಸರಕಾರದಲ್ಲಿ ಎಲ್ಲಾ ರೀತಿಯಲ್ಲೂ ಲೂಟಿ ನಡೆಯುತ್ತಿದೆ, ರೈತರ ಗದ್ದೆಯಲ್ಲಿ ಭತ್ತ ನಾಟಿ ಮಾಡೋದು ಗಿಮಿಕ್, ನಾಟಿ ಮಾಡಿ ಕುಮಾರಸ್ವಾಮಿ ನಾಟಕವಾಡುತ್ತಿದ್ದಾರೆ. ಮೊದಲು ಬಗರ್ ಹುಕುಂ ರೈತರಿಗೆ ಭೂಮಿ ಕೊಡಿ ಎಂದು ಆಗ್ರಹಿಸಿದರು. 

ನಾನು ಪೆದ್ದ, ಸಂವಿಧಾನ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ನಾನು ಏಯ್ ಸಿದ್ದರಾಮಯ್ಯ ಎಂದು ಏಕವಚನದಲ್ಲಿ ಮಾತನಾಡಬಹುದು. ಆದರೆ ನಮ್ಮ ಪಕ್ಷದ ಸಂಸ್ಕೃತಿ ಅದಲ್ಲ. ಏಕವಚನದಲ್ಲಿ ಮಾತನಾಡಿದರೆ ಕೆಟ್ಟ ಪದ ಬಳಸಬೇಕಾಗುತ್ತದ ಎಂದರು. ನೀತಿ ಸಂಹಿತೆ ವೇಳೆ ಸಮಾಜ ಕಲ್ಯಾಣ, ಪೊಲೀಸ್, ಕಂದಾಯ ಇಲಾಖೆಗಳಲ್ಲಿ ವರ್ಗಾವಣೆಯಾಗುತ್ತಿದೆ. ಇದೇನಾ ಸಿದ್ದರಾಮಯ್ಯನವರೇ ಸಂವಿಧಾನ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರಿಗೆ ಸೋತರೂ ಬುದ್ಧಿ ಬಂದಿಲ್ಲ. ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದೇ ಡಾ.ಜಿ.ಪರಮೇಶ್ವರ್. ಕೊರಟಗೆರೆಯಲ್ಲಿ ಪರಮೇಶ್ವರ್ ಸೋಲಿಸಿದ್ದು ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಪರಮೇಶ್ವರ್. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸೋತಿದ್ದಾರೆ. ಜನ ನಿಮ್ಮನ್ನು ಮನೆಗೆ ಕಳುಹಿಸಿದ್ದಾರೆ. ನರೇಂದ್ರ ಮೋದಿಯವರನ್ನು ಇಡೀ ದೇಶವೇ ಒಪ್ಪಿದೆ. ಸಿದ್ದರಾಮಯ್ಯ ಹಿಂದುಳಿದ ವರ್ಗದ ಲೀಡರ್ ಅಲ್ಲ. ನರೇಂದ್ರ ಮೋದಿ ಹಿಂದುಳಿದ ವರ್ಗದ ಲೀಡರ್. ಸಿದ್ದರಾಮಯ್ಯ ಅವರನ್ನು ರಾಷ್ಟ್ರೀಯ ಲೀಡರ್ ಮಾಡೋಕೆ ಹೊರಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಸ್ಥಿತಿ ಏನಾಯ್ತು ಎಂದು ಪ್ರಶ್ನಿಸಿದರು.

ಬಿಜೆಪಿ ಶಾಸಕರು ಜೆಡಿಎಸ್ ಪಕ್ಷ ಸೇರುತ್ತಾರೆ ಎಂಬ ಸಚಿವ ಎಚ್.ಡಿ.ರೇವಣ್ಣ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಮುಂದಿನ ವರ್ಷ ರೇವಣ್ಣ ಯಾವ ಪಕ್ಷದಲ್ಲಿ ಇರುತ್ತಾರೆ ಕಾದು ನೋಡಿ ಎಂದು ಹೇಳಿದರು.

ಸಾಲ ಮನ್ನಾ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದವಾಗಿದೆ. ಬಹುಮತ ಇಲ್ಲದೆ ಸಂಪೂರ್ಣ ಸಾಲ ಮನ್ನಾ ಇಲ್ಲ ಎಂದರು. ಮುಂದೆ ಪ್ರಣಾಳಿಕೆ ಬದಲಾಯಿಸಲಿ, ಬಹುಮತ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದು ಬರೆದುಕೊಳ್ಳಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News