ಹಾವೇರಿ: ವಿದ್ಯಾರ್ಥಿನಿಯ ಸುಟ್ಟು ಹತ್ಯೆಗೈದ ಪ್ರಕರಣ; ಸೋದರ ಸಂಬಂಧಿ ಸೆರೆ

Update: 2018-08-11 18:08 GMT

ಹಾವೇರಿ, ಆ.11: ಅರೆಬೆಂದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಕೊಲೆಗೈದು ಸುಟ್ಟುಹಾಕಿದ್ದ ಹಂತಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ಮಂಜನಗೌಡ ಪಾಟೀಲ್ ಆಲಿಯಾಸ್ ಶಶಿ (28) ಎಂದು ತಿಳಿದು ಬಂದಿದ್ದು, ಈತ ಮೃತಳ ಸೋದರ ಸಂಬಂಧಿಯಾಗಿದ್ದು, ವಿದ್ಯಾರ್ಥಿನಿಯ ಮನೆಮಂದಿಯೊಂದಿಗೆ ಹತ್ತಿರದವನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ: ವಿದ್ಯಾರ್ಥಿನಿ ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಆರೋಪಿ ಮಂಜನಗೌಡ ಆಲಿಯಾಸ್ ಶಶಿ ಆಕೆಯನ್ನು ಕಾರಿನಲ್ಲಿ ಮನೆಗೆ ಕರೆದೊಯ್ಯುವುದಾಗಿ ಕರೆದು ಕೊಂಡು ಬಂದಿದ್ದಾನೆ. ಆತನ ಅಕ್ಕನ ಮನೆ ಹಾವೇರಿಯಲ್ಲಿದ್ದು, ಅಕ್ಕನ ಮನೆಯವರೆಲ್ಲ ಪ್ರವಾಸ ತೆರಳಿದ್ದರು. ಇದನ್ನು ತಿಳಿದುಕೊಂಡಿದ್ದ ಮಂಜನಗೌಡ ಆಕೆಯನ್ನು ತನ್ನ ಅಕ್ಕನ ಮನೆಗೆ ಹೋಗಿ ಬರುವ ಎಂದು ಹೇಳಿ ಪುಸಲಾಯಿಸಿ ಕರೆದು ಕೊಂಡು ಹೋಗಿದ್ದಾನೆ. ಅಲ್ಲಿ ಅಕ್ಕನ ಮನೆಯ ಒಳಗೆ ಹೋಗಿದ್ದು, ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬಾಲಕಿ ವಿರೋಧಿಸಿದ್ದು, ಇಬ್ಬರ ನಡುವೆ ತಳ್ಳಾಟ ನಡೆದಿದೆ. ಆ ಸಂದರ್ಭ ಆಕೆ ಮೂರ್ಛೆ ಹೋಗಿದ್ದು, ಮೂರ್ಛೆ ಹೋದವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದನಾದರೂ ಸಾಧ್ಯವಾಗದೇ ಇದ್ದಾಗ ಆಕೆಯ ತಲೆಗೆ ಮರದ ದೊಣ್ಣೆಯೊಂದರಲ್ಲಿ ಹೊಡೆದು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಬಳಿಕ ಅಲ್ಲಿಂದ ಕಾರಿನಲ್ಲಿ ಹಾಕಿಕೊಂಡು ರಾಷ್ಟ್ರೀಯ ಹೆದ್ದಾರಿ 4ರ ವರದಳ್ಳಿ ಸೇತುವೆ ಪಕ್ಕದ ಪೊದೆಗೆ ತಂದು ಬೆಂಕಿ ಹಾಕಿ ಸುಟ್ಟುಹಾಕಿರುವುದಾಗಿ ವಿಚಾರಣೆಯ ವೇಳೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 ಹಾಗೂ ಪೊಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News