​ಉತ್ತರಾಖಂಡದಲ್ಲಿ ಕಸಾಯಿಖಾನೆಗಳಿಗೆ ಅವಕಾಶವಿಲ್ಲ ಎಂದ ಸಿಎಂ ತ್ರಿವೇಂದ್ರ ಸಿಂಗ್ ರಾವತ್

Update: 2018-08-12 03:51 GMT

ಡೆಹ್ರಾಡೂನ್, ಆ. 12: ರಾಜ್ಯದಲ್ಲಿ ಯಾವುದೇ ಕಸಾಯಿಖಾನೆಗಳಿಗೆ ಅವಕಾಶವಿಲ್ಲ ಹಾಗೂ ಯಾವುದೇ ಹೊಸ ಲೈಸನ್ಸ್ ನೀಡುವ ಪ್ರಶ್ನೆಯೇ ಇಲ್ಲ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಪ್ರಕಟಿಸಿದ್ದಾರೆ.

"ಪ್ರಸ್ತುತ ಇರುವ ಕಾನೂನಿನ ಅನ್ವಯ ಗೋಹತ್ಯೆ ನಿಷೇಧ. ರಾಜ್ಯದಲ್ಲಿ ನಮ್ಮ ಸರ್ಕಾರ ಯಾವುದೇ ಕಸಾಯಿಖಾನೆಗೆ ಅವಕಾಶ ನೀಡುವುದಿಲ್ಲ" ಎಂದು ಉತ್ತರಾಖಂಡ ಗೋಸಂತತಿ ಕಾಯ್ದೆಯನ್ನು ಉಲ್ಲೇಖಿಸಿದರು. "ಹರಿದ್ವಾರದಲ್ಲಿ 2021ರಲ್ಲಿ ಮಹಾಕುಂಭ ಮೇಳ ನಡೆಯುವ ಮುನ್ನ ರಾಜ್ಯಾದ್ಯಂತ ಬೀದಿ ದನಗಳಿಗೆ ಸೂರು ಕಲ್ಪಿಸುವ ಸಲುವಾಗಿ ದೊಡ್ಡಿಗಳನ್ನು ಸ್ಥಾಪಿಸಲಾಗುವುದು" ಎಂದು ಸ್ಪಷ್ಟಪಡಿಸಿದರು.

ಲಿಂಗ ನಿರ್ಧರಿತ ವೀರ್ಯಾಣು ಉತ್ಪಾದನೆ ಸಂಬಂಧ ಉತ್ತರಾಖಂಡ ಜಾನುವಾರು ಅಭಿವೃದ್ಧಿ ಮಂಡಳಿ ಮತ್ತು ಅಮೆರಿಕದ ಇಂಗುರಾಂಗ್ ಎಲ್‌ಎಲ್‌ಸಿ ಸೆಕ್ಸಿಂಗ್ ಟೆಕ್ನಾಲಜೀಸ್ ನಡುವೆ ಒಪ್ಪಂದ ಸಹಿ ಮಾಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

"ರಾಜ್ಯದಲ್ಲಿ ಕಸಾಯಿಖಾನೆಗಳನ್ನು ತೆರೆಯಲು ಹೊಸ ಲೈಸನ್ಸ್ ನೀಡುವುದಿಲ್ಲ. ಜತೆಗೆ ಈಗಾಗಲೇ ಹಿಂದೆ ನೀಡಿದ ಲೈಸನ್ಸ್‌ಗಳನ್ನು ರದ್ದುಪಡಿಸಲಾಗುವುದು. ಹಿಂದಿನ ಕಾಂಗ್ರೆಸ್ ಸರ್ಕಾರ 2016ರಲ್ಲಿ ಹರಿದ್ವಾರದಲ್ಲಿ ಕಸಾಯಿಖಾನೆ ಆರಂಭಿಸಲು ಅನುಮತಿ ನೀಡಿತ್ತು" ಎಂದು ಹೇಳಿದರು. ಈ ಆದೇಶವನ್ನು ಕೂಡಾ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. ಗೋ ಸಂರಕ್ಷಣೆಗಾಗಿಯೇ ಡೆಹ್ರಾಡೂನ್, ಹರಿದ್ವಾರ್ ಮತ್ತು ಉಧಾಂಸಿಂಗ್‌ನಗರದಲ್ಲಿ ವಿಶೇಷ ಪೊಲೀಸ್ ಪಡೆಗಳನ್ನು ರಚಿಸಲಾಗುವುದು ಎಂದು ಸಿಎಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News