ಸರಕಾರಿ ಶಾಲೆ ಮಕ್ಕಳು ಬಡವಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು: ಸವಿತಾ ರಮೇಶ್

Update: 2018-08-12 11:52 GMT

ಮೂಡಿಗೆರೆ, ಆ.11: ಸರಕಾರಿ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಶಾಲೆ ಮಕ್ಕಳು ಬಡವಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕೆಂದು ತಾ.ಪಂ. ಉಪಾಧ್ಯಕ್ಷೆ ಸವಿತಾ ರಮೇಶ್ ಹೇಳಿದರು. 

ಅವರು ಶುಕ್ರವಾರ ಕಿರುಗುಂದ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆ ಮಕ್ಕಳಿಗೆ ಸರಕಾರದ ಉಚಿತ ಶೂ ವಿತರಿಸಿ ಮಾತನಾಡಿದರು. ಸರಕಾರಿ ಶಾಲೆ ಮಕ್ಕಳು ಬಡ ವರ್ಗಕ್ಕೆ ಸೇರಿದವರೆಂಬ ಕೀಳರಿಮೆ ಬೇಡ. ಶಾಲೆ ಮಕ್ಕಳು ಬಡವರು, ಶ್ರೀಮಂತರು, ಜಾತಿ, ಧರ್ಮ ಇವೆಲ್ಲವನ್ನು ಬದಿಗಿಟ್ಟು, ಉತ್ತಮ ಶಿಕ್ಷಣಕ್ಕಾಗಿ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಪ್ರಯತ್ನಿಸಿ, ಸರಕಾರದಿಂದ ದೊರೆಯುವ ಎಲ್ಲಾ ರೀತಿಯ ಸವಲತ್ತುಗಳನ್ನು ಮಕ್ಕಳಿಗೆ ಪ್ರಾಮಾಣಿಕವಾಗಿ ತಲುಪಿಸಬೇಕೆಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಲಕ್ಷ್ಮಣ್ ಮಾತನಾಡಿ, ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ವಿವಿಧ ರೀತಿಯ ತೊಂದರೆಗಳಿರುತ್ತದೆ. ಶಾಲೆ ಪರಿಕರ, ಸಮವಸ್ತ್ರ, ಮಧ್ಯಾಹ್ನದ ಬಿಸಿ ಊಟ, ಶೂ, ಸೈಕಲ್, ಪುಸ್ತಕ ಮತ್ತಿತರೆ ಸರಕಾರಿ ಸೌಲಭ್ಯ ಸಿಗುತ್ತಿರುವುದರಿಂದ ಬಡ ವರ್ಗದ ಮಕ್ಕಳು ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣಕ್ಕಾಗಿ ಇನ್ನೂ ಹಲವು ಯೋಜನೆಗಳನ್ನು ಸರಕಾರ ನೀಡಬೇಕೆಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ರಾಜಶೇಖರ್, ಎಸ್‌ಡಿಎಂಸಿ ಉಪಾಧ್ಯಕ್ಷ ಕುಮಾರ್, ಮುಖ್ಯ ಶಿಕ್ಷಕಿ ಬಿ.ಪಿ.ಸೌಭಾಗ್ಯ, ಶಿಕ್ಷಕಿಯರಾದ ಸುಶೀಲ, ಸುನಿತಾ, ಕವಿತ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News