ಭಾರೀ ಮಳೆಗೆ ಮಲೆನಾಡು ತತ್ತರ: ಧರೆಗುರುಳಿದ ಮರಗಳು, ವಾಹನ ಸಂಚಾರಕ್ಕೆ ಅಡಚಣೆ

Update: 2018-08-12 12:18 GMT

ಚಿಕ್ಕಮಗಳೂರು, ಆ.12: ಜಿಲ್ಲೆಯ ಮಲೆನಾಡು ಭಾಗದಲ್ಲಿ ರವಿವಾರವೂ ಮಳೆ ಮಂದುವರೆದಿದೆ. ನಿರಂತರ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಮಲೆನಾಡು ಭಾಗದ ಅಲ್ಲಲ್ಲಿ ರಸ್ತೆಗಳು ಧರೆಗುರುಳಿದ ಪರಿಣಾಮ ರಸ್ತೆ ವಾಹನ ಸವಾರರು, ಪ್ರವಾಸಿಗರು ಪರದಾಡಿದರು. 

ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಭಾಗದಲ್ಲಿ ರವಿವಾರ ಬೆಳಗ್ಗೆಯಿಂದಲೇ ಸಾಧಾರಣ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಕರಾವಳಿ-ಚಿಕ್ಕಮಗಳೂರು ಜಿಲ್ಲೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಾದ್ಯಂತ ಮಂಜು ಮುಸುಕಿದ ವಾತಾವರಣದಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಚಿಕ್ಕಮಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಡಿಗೆರೆ ಹಾಂದಿ ಸಮೀಪ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದದರಿಂದ ಎರಡು ಗಂಟೆಗೂ ಹೆಚ್ಚಿನ ಕಾಲ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. 

ಚಿಕ್ಕಮಗಳೂರು ತಾಲೂಕಿನ ಗಿರಿ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುಡ್ಡ ಕುಸಿದ ಪರಿಣಾಮ ಮುಳ್ಳಯ್ಯನಗಿರಿ, ಬಾಬಬುಡನ್ ಗಿರಿ ತೆರಳುವ ಮಾರ್ಗ ಸಂಪೂರ್ಣ ಬಂದ್ ಆಗಿತ್ತು. ಕೈಮರ ಸಮೀಪದಲ್ಲಿ ಗುಡ್ಡ ಕುಸಿದ ಪರಿಣಾಮ ಮುಳ್ಳಯ್ಯನಗಿರಿ ಮತ್ತು ಬಾಬಬುಡನ್‍ಗಿರಿ ಪ್ರದೇಶಕ್ಕೆ ತೆರಳಲು ಬಂದಿದ್ದ ಪ್ರವಾಸಿರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾರಂತ್ಯವಾದ ಹಿನ್ನೆಲೆಯಲ್ಲಿ ಗಿರಿ ಪ್ರದೇಶಕ್ಕೆ ತೆರಳಲು ಬಂದಿದ್ದ ಪ್ರವಾಸಿಗರು ಪರ್ಯಾಯ ಮಾರ್ಗವಿಲ್ಲದೆ ಪರದಾಡುವಂತಾಯಿತು. ಗುಡ್ಡ ಕುಸಿದ ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಮಣ್ಣು ತೆರವು ಕಾರ್ಯಚರಣೆ ನಡೆಸಿದರು.

ಇನ್ನು ಕೊಪ್ಪ ತಾಲೂಕಿನ ಹೇರೂರು-ಬಸರೀಕಟ್ಟೆ ಸಂಪರ್ಕದ ರಸ್ತೆಯಲ್ಲಿ ರವಿವಾರ ಮಧ್ಯಾಹ್ನದ ವೇಳೆ ಮಣ್ಣು ಹಾಗೂ ಮರ ಕುಸಿದು ಬಿದ್ದು ಸುಮಾರು 2 ಗಂಟೆಗಳ ಕಾಲ ವಾಹನಗಳು ಹಾಗೂ ಖಾಸಗಿ ಸಾರಿಗೆ ಬಸ್‍ಗಳ ಸಂಚಾರ ಬಂದ್ ಆಗಿತ್ತು. ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯರು ಮಣ್ಣು, ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆಂದು ತಿಳಿದು ಬಂದಿದೆ.

ಮಲೆನಾಡು ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ, ಭದ್ರಾ, ಹೇಮಾವತಿ ನದಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ನದಿ ಪಾತ್ರದ ಪ್ರದೇಶದಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯ ನಡುವೆಯೇ ಈ ಭಾಗದಲ್ಲಿ ಭತ್ತದ ಗದ್ದೆ ನಾಟಿ ಕಾರ್ಯ ಬಿರುಸಿನಿಂದ ಸಾಗುತ್ತಿದೆ. 

ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ಭಾನುವಾರವೂ ಮೋಡ ಮುಸುಕಿದ ವಾತವರಣ ಇದ್ದು, ಆಗಾಗೇ ಸೋನೆ ಮಳೆಯಾಗುತ್ತಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತವರಣವಿದ್ದು, ಆಗಾಗ ಮಳೆಯಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News