ಚಿಕ್ಕಮಗಳೂರು: ಕೊಗ್ರೆಯಲ್ಲಿ ನಿಲ್ಲದ ಭೂಕಂಪನ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Update: 2018-08-12 12:33 GMT

ಚಿಕ್ಕಮಗಳೂರು, ಆ.12: ಜಿಲ್ಲೆಯ ಕೊಪ್ಪ ತಾಲೂಕಿನ ಕೊಗ್ರೆ ಸಮೀಪದ ಗ್ರಾಮಗಳ ವ್ಯಾಪ್ತಿಯಲ್ಲಿ ರವಿವಾರ ಮತ್ತೆ ಭೂಮಿ ಕಂಪಿಸಿದ್ದು, ಗ್ರಾಮಗಳ ನಿವಾಸಿಗಳು ಮತ್ತೆ ಆತಂಕಕ್ಕೊಳಗಾಗಿದ್ದಾರೆಂದು ತಿಳಿದು ಬಂದಿದೆ.

ಕೊಪ್ಪ ತಾಲೂಕಿ ಮೇಗುಂದ ಹೋಬಳಿ ವ್ಯಾಪ್ತಿಯಲ್ಲಿರುವ ಶಾಂತಿಗ್ರಾಮ, ಅತ್ತಕುಡಿಗೆ, ಬೆತ್ತದಕೊಳಲು, ಭೈರೇದೇವರು ಗ್ರಾಮಗಳ ವ್ಯಾಪ್ತಿಯಲ್ಲಿ ರವಿವಾರ ಮಧ್ಯಾಹ್ನ 3ರ ವೇಳೆ ಭಾರೀ ಸದ್ದಿನೊಂದಿಗೆ ಭೂ ಕಂಪನವಾಗಿದೆ. ಭೂಕಂಪನದಿಂದ ಮನೆಗಳಲ್ಲಿದ್ದ ಪಾತ್ರೆ ಮತ್ತಿತರ ಸಾಮಾನುಗಳು ಉರುಳಿಬಿದ್ದಿದ್ದು, ಇದರಿಂದ ಭೀತಿಗೊಳಗಾದ ಗ್ರಾಮಸ್ಥರು ಕೂಡಲೇ ಮನೆಗಳಿಂದ ಹೊರ ಬಂದಿದ್ದಾರೆ. ಕಳೆದೊಂದು ವಾರದಲ್ಲಿ 3 ನೇ ಬಾರಿ ಈ ರೀತಿ ಭಾರೀ ಸದ್ದಿನೊಂದಿಗೆ ಭೂ ಕಂಪಿಸಿದೆ ಎಂದು ತಿಳಿದು ಬಂದಿದೆ.

ರವಿವಾರ ಕೊಗ್ರೆ ಸಮೀಪದ ಅಬ್ಬಿಕಲ್ಲು ಎಂಬಲ್ಲಿಯೂ ಭೂ ಕಂಪಿಸಿದ್ದು, ಕೆಲ ಸೆಕೆಂಡುಗಳವರೆಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದು, ಗ್ರಾಮಸ್ಥರು ಮನೆಯೊಳಗೆ ಹೋಗಲು, ರಾತ್ರಿ ವೇಳೆ ಮಲಗಲೂ ಹೆದರುತ್ತಿದ್ದಾರೆಂದು ತಿಳಿದು ಬಂದಿದೆ.

ಕೊಪ್ಪ ತಾಲೂಕಿನ ಮೇಗುಂದ ಹೋಬಳಿ ವ್ಯಾಪ್ತಿಯಲ್ಲಿರುವ ಶಾಂತಿಗ್ರಾಮ, ಅತ್ತಕುಡಿಗೆ, ಬೆತ್ತದಕೊಳಲು, ಭೈರೇದೇವರು ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 100 ಕ್ಕೂ ಹೆಚ್ಚು ಬಾರಿ ಭೂಮಿಯೊಳಗೆ ಬಾಂಬ್ ಸಿಡಿಸಿದಂತೆ ಭಾರೀ ಸದ್ದು ಕೇಳಿ ಬಂದಿದೆ ಎನ್ನಲಾಗುತ್ತಿದ್ದು, ಭೂಮಿಯೊಳಗೆ ನಡೆಯುತ್ತಿರುವ ಅಸಹಜ ಕ್ರಿಯೆಗೆ ಬೇಸತ್ತು ಹೋಗಿದ್ದು, ಈ ಸಂಬಂಧ ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದರಿಂದ ಕೊಪ್ಪ ತಹಶೀಲ್ದಾರ್ ನೇತೃತ್ವದ ತಂಡ ಕೊಗ್ರೆ ಗ್ರಾಮದ ದೇವಾಲಯವೊಂದರ ಬಳಿ ಇತ್ತೀಚೆಗೆ ಗುಹೆಯಂತಹ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. 

ಈ ಹಿನ್ನೆಲೆಯಲ್ಲಿ ಗ್ರಾಮಗಳ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ವಿಪತ್ತು ನಿರ್ವಹಣ ತಂಡದಿಂದ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಈ ಅಸಹಜ ಕ್ರಿಯೆ ಸಂಬಂಧ ಸ್ಥಳ ಪರಿಶೀಲಿಸಿ ಅವಘಡ ಸಂಭವಿಸುವ ಮೊದಲು ಭೂ ಕಂಪನಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಈ ಬಗ್ಗೆ ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News