‘ಏರ್ ಶೋ’ ಲಕ್ನೋಗೆ ಸ್ಥಳಾಂತರ ಸರಿಯಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-08-12 12:44 GMT

ಹುಬ್ಬಳ್ಳಿ, ಆ. 12: ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ‘ಏರ್ ಶೋ’ವನ್ನು ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ.

ರವಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳಿವೆ. ಆದುದರಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರೋ ಶೋವನ್ನು ಲಕ್ನೋಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

‘ಏರೋ ಶೋ’ ನಡೆಸಲು ಬೆಂಗಳೂರು ಅತ್ಯಂತ ಸುಸಜ್ಜಿತ ನಗರವಾಗಿತ್ತು. ಅಲ್ಲದೆ, ಅಗತ್ಯ ಮೂಲಭೂತ ಸೌಕರ್ಯಗಳು ಕರ್ನಾಟಕ ರಾಜ್ಯದಲ್ಲಿವೆ. ಹೀಗಾಗಿಯೇ ಈ ಹಿಂದಿನ ಸರಕಾರಗಳು ಬೆಂಗಳೂರು ನಗರವನ್ನೇ ಆಯ್ಕೆ ಮಾಡಿಕೊಂಡಿದ್ದವು ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಕರ್ನಾಟಕವನ್ನು ಕಡೆಗಣಿಸಿ ಲಕ್ನೋವನ್ನು ಆಯ್ಕೆ ಮಾಡಿಕೊಂಡಿದ್ದು ಸರಿಯಲ್ಲ. ಬೆಂಗಳೂರಿನಲ್ಲೇ ಏರ್ ಶೋ ನಡೆಸಲು ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಲಾಗಿತ್ತು. ಆದರೂ, ಏರ್ ಶೋ ನಡೆಸಲು ಕರ್ನಾಟಕ ರಾಜ್ಯವನ್ನು ಪರಿಗಣಿಸಿಲ್ಲ ಎಂದು ಟೀಕಿಸಿದರು.

ಇಲಾಖೆಗೆ ಬಿಟ್ಟದ್ದು: ಕೆ-ಶಿಫ್ ಕಚೇರಿಯನ್ನು ಹಾಸನ ಜಿಲ್ಲೆಗೆ ಸ್ಥಳಾಂತರ ಮಾಡಿದ ವಿಚಾರ ಲೋಕೋಪಯೋಗಿ ಇಲಾಖೆಗೆ ಬಿಟ್ಟಿದ್ದು. ಇದರಲ್ಲಿ ನಾನು ಯಾವುದೇ ಕಾರಣಕ್ಕೂ ಮಧ್ಯಪ್ರವೇಶಿಸುವುದಿಲ್ಲ ಎಂದು ಕುಮಾರಸ್ವಾಮಿ ಇದೇ ವೇಳೆ ಸ್ಪಷ್ಟಣೆ ನೀಡಿದರು.

ಸಿಎಂ ಆದ ಬಳಿಕ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ಸ್ಥಳೀಯ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾನು ಇಲ್ಲಿ ಇರಲು ಆಗುವುದಿಲ್ಲ. ಇಲ್ಲವಾದಲ್ಲಿ ನಾನು ಮೂರು ದಿನ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳುವವನಿದ್ದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿದ ನಂತರ ನಾನು ಪ್ರವಾಸ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News