'ಏರ್ ಶೋ' ಸ್ಥಳಾಂತರ ಕರ್ನಾಟಕಕ್ಕೆ ಮಾಡಿದ ಅಪಮಾನ: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2018-08-12 12:50 GMT

ಬೆಂಗಳೂರು, ಆ. 12: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಏರ್ ಶೋವನ್ನು ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರ ಮಾಡಿರುವುದು ಕರ್ನಾಟಕ ರಾಜ್ಯಕ್ಕೆ ಮಾಡಿದ ಅಪಮಾನ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 22 ವರ್ಷಗಳಿಂದಲೂ ಏರ್ ಶೋ ಬೆಂಗಳೂರಿನಲ್ಲೆ ನಡೆಯುತ್ತಿತ್ತು. ಆದರೆ ಇದೀಗ ಲಕ್ನೋಗೆ ಸ್ಥಳಾಂತರ ಮಾಡಿರುವುದು ಸರಿಯಲ್ಲ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ಆದರೆ, ಇದೀಗ ಅವರೆ ಏರ್ ಶೋ ವನ್ನು ಉತ್ತರ ಪ್ರದೇಶ ಲಕ್ನೋಗೆ ಸ್ಥಳಾಂತರಕ್ಕೆ ಮುಂದಾಗಿರುವುದು ಸರಿಯಲ್ಲ. ಬೆಂಗಳೂರಿನಲ್ಲಿ ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ಹೆಸರಾಗಿರುವ ಎಚ್‌ಎಎಲ್ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇಲ್ಲಿದ್ದ ಕಾರಣಕ್ಕೆ ಏರ್ ಶೋ ಆಯೋಜಿಸಲಾಗಿತ್ತು ಎಂದರು.

ಏರ್ ಶೋ ಸ್ಥಳಾಂತರ ದುರಾದೃಷ್ಟಕರ. ಸ್ವಾತಂತ್ರ್ಯ ಬಂದಾಗಿನಿಂದ ಬೆಂಗಳೂರು ಡಿಫೆನ್ಸ್ ಹಬ್ ಆಗಿತ್ತು. ಆದರೆ, ಎನ್‌ಡಿಎ ಸರಕಾರ ಕರ್ನಾಟಕದಲ್ಲಿನ ರಕ್ಷಣಾ ಇಲಾಖೆಯ ಪ್ರಮುಖ ಕೇಂದ್ರಗಳನ್ನು ಸ್ಥಳಾಂತರ ಮಾಡುತ್ತಿದೆ. ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಣೆ ನೀಡಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News