ಕೋರ್ಟ್‌ಗಳಿಗೆ ಮೂಲಸೌಲಭ್ಯ ಕಲ್ಪಿಸಲು ಹಣಕಾಸಿನ ಕೊರತೆ ನೆಪ ಬೇಡ: ನ್ಯಾ.ದೀಪಕ್ ಮಿಶ್ರಾ

Update: 2018-08-12 13:06 GMT

ಬೆಂಗಳೂರು/ಹುಬ್ಬಳ್ಳಿ, ಆ. 12: ನ್ಯಾಯಾಲಯ ಕಟ್ಟಡಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಸರಕಾರಗಳು ಹಣಕಾಸಿನ ಕೊರತೆ ನೆಪ ಹೇಳುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.

ರವಿವಾರ ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಆ ಪ್ರಕ್ರಿಯೆ ಮುಂದುವರೆಯುತ್ತಿರಬೇಕು ಎಂದು ಸಲಹೆ ಮಾಡಿದರು.

ನ್ಯಾಯಾಲಯಗಳಿಗೆ ಲಭ್ಯವಿರುವ ನೂತನ ತಂತ್ರಜ್ಞಾವನ್ನೂ ಅಳವಡಿಸಬೇಕು. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದು. ಒಟ್ಟಾರೆ ನ್ಯಾಯಾಂಗದ ಪ್ರಸ್ತಾವನೆಗಳಿಗೆ ಕಾರ್ಯಾಂಗ ಇಲ್ಲ ಎಂದು ಹೇಳಬಾರದು ಎಂದು ದೀಪಕ್ ಮಿಶ್ರಾ ತಿಳಿಸಿದರು.

ನ್ಯಾಯಾಲಯ ಕಟ್ಟಡ ಅಥವಾ ಬೇರೆ ಯಾವುದೇ ಸೌಲಭ್ಯಗಳಿರಲಿ, ಅವುಗಳು ಗುಣಮಟ್ಟದಿಂದ ಕೂಡಿರಬೇಕೇ ವಿನಃ ಯಾವುದೇ ಕಾರಣಕ್ಕೂ ಸಾಂಕೇತಿಕ ಆಗಿರಬಾರದು. ನ್ಯಾಯಾಲಯಕ್ಕೆ ಬರುವ ವಕೀಲರು, ಸಿಬ್ಬಂದಿ, ಕಕ್ಷಿದಾರರಿಗೆ ತಾವು ಪವಿತ್ರ ಸ್ಥಳದಲ್ಲಿದ್ದೇವೆ ಎಂಬ ಭಾವನೆ ಬರಬೇಕೆಂದು ದೀಪಕ್ ಮಿಶ್ರಾ ಸೂಚಿಸಿದರು.

ಏಷ್ಯಾದಲ್ಲೆ ಮಾದರಿ: ಏಷ್ಯಾದಲ್ಲೇ ಸುಸಜ್ಜಿತವೆನಿಸಿದ ತಾಲೂಕು ಮಟ್ಟದ ಕೋರ್ಟ್ ಕಟ್ಟಡಗಳಲ್ಲಿ ದೇಶದಲ್ಲೇ ಅತಿ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಇಂದು ಉದ್ಘಾಟನೆಗೊಂದ ಹುಬ್ಬಳ್ಳಿಯ ತಿಮ್ಮಸಾಗರ ರಸ್ತೆಯ ನೂತನ ಕೋರ್ಟ್ ಸಂಕೀರ್ಣ. ಸುಮಾರು 122ಕೋಟಿ ರೂ.ವೆಚ್ಚದಲ್ಲಿ 5.5ಎಕರೆ ಪ್ರದೇಶದಲ್ಲಿ ಸಂಪೂರ್ಣ ಹವಾನಿಯಂತ್ರಿತ ಕೋರ್ಟ್ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಇಂತಹ ಸೌಲಭ್ಯವುಳ್ಳ ತಾಲೂಕು ಕಟ್ಟಡ ದೇಶದಲ್ಲಷ್ಟೇ ಅಲ್ಲ, ಏಷ್ಯಾದಲ್ಲೇ ಮೊದಲನೆಯದ್ದು ಎಂದು ಹೇಳಲಾಗಿದೆ.

ಮೊದಲ ಮಹಡಿಯಲ್ಲಿ ಜೆಎಂಎಫ್‌ಸಿ, ಎರಡನೆ ಮಹಡಿಯಲ್ಲಿ ಸಿವಿಲ್ ನ್ಯಾಯಾಲಯ, ಮೂರನೆ ಮಹಡಿಯಲ್ಲಿ ಸೀನಿಯರ್ ಸಿವಿಲ್, ನಾಲ್ಕನೆ ಮಹಡಿಯಲ್ಲಿ ಡಿಸ್ಟ್ರಿಕ್ ನ್ಯಾಯಾಲಯಗಳಿವೆ. ಐದನೆ ಮಹಡಿಯನ್ನು ವಕೀಲರ ಸಂಘಕ್ಕೆ ಬಿಟ್ಟುಕೊಡಲಾಗಿದೆ. ಮತ್ತೊಂದು ವಿಶೇಷವೆಂದರೆ ನ್ಯಾಯಾಲಯದ ಸಂಕೀರ್ಣದಲ್ಲೇ ಇದೇ ಮೊದಲ ಬಾರಿಗೆ ಬಂಧೀಖಾನೆಯನ್ನೂ ನಿರ್ಮಿಸಲಾಗಿದೆ.

ಪ್ರತಿ ಮಹಡಿಯಲ್ಲೂ ಬಂಧೀಖಾನೆ ಇದ್ದು, ಆರೋಪಿಗಳ ವಿಚಾರಣೆ ಮುಂದೂಡಿದರೆ ಅಲ್ಲೆ ಇರಲು ವ್ಯವಸ್ಥೆ ಮಾಡಲಾಗಿದೆ. ಕಕ್ಷೀದಾರರ ವಿಶ್ರಾಂತಿ ಕೊಠಡಿ, ವಿಚಾರಣಾದೀನ ಕೈದಿಗಳಿಗೆ ಪ್ರತ್ಯೇಕ ಕೊಠಡಿ, ವಕೀಲರ ಭವನ, ಸಭಾಭವನವೂ ಇದೆ.

ಈ ಸಂಕೀರ್ಣದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಲ್ಲಿರುವಂತೆ ನ್ಯಾಯಾಧೀಶರ ಕೊಠಡಿಗಳನ್ನು ವಿಶಾಲವಾಗಿ ನಿರ್ಮಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಮೋಹನ್ ಎಂ. ಶಾಂತನಗೌಡರ್, ಎಸ್.ಅಬ್ದುಲ್ ನಜೀರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಎಚ್.ಡಿ.ರೇವಣ್ಣ, ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸೇರಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News