ಗೌರಿ ಲಂಕೇಶ್ ಹತ್ಯೆ ಪ್ರಕರಣ: 'ಸೂತ್ರಧಾರ ದಾದಾ'ಗಾಗಿ ಬಲೆ ಬೀಸಿದ ಸಿಟ್..!

Update: 2018-08-12 14:06 GMT

ಬೆಂಗಳೂರು, ಆ.12: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಕೃತ್ಯದ ಪ್ರಮುಖ ಸೂತ್ರಧಾರನ(ಮಾಸ್ಟರ್ ಮೈಂಡ್) ಪತ್ತೆಗಾಗಿ ಸಿಟ್(ಎಸ್‌ಐಟಿ) ತೀವ್ರ ಹುಡುಕಾಟ ನಡೆಸುತ್ತಿದೆ.

ಪ್ರಕರಣದ ಪ್ರಮುಖ ಎನ್ನಲಾದ ನಿಹಾಲ್ ಯಾನೆ ದಾದಾ ಎಂಬಾತನಿಗಾಗಿ ಸಿಟ್ ತನಿಖಾಧಿಕಾರಿಗಳು ಮಹಾರಾಷ್ಟ್ರ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಕಾರ್ಯಚರಣೆ ಮುಂದುವರೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕೃತ್ಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ 13 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಇವರೊಂದಿಗೆ ಪ್ರಮುಖ ಪಾತ್ರವಹಿಸಿದ್ದ ವ್ಯಕ್ತಿ ನಿಹಾಲ್ ಯಾನೆ ದಾದಾ ಎನ್ನಲಾಗಿದೆ. ಇನ್ನೂ ಈತ ಬಂಧಿತ ಆರೋಪಿ ಅಮೋಲ್ ಕಾಳೆಯ ಗುರುವಾಗಿದ್ದು, ಅಮೋಲ್‌ಗೆ ಮಾತ್ರ ಪರಿಚಿತನಾಗಿದ್ದಾನೆ. ಆತನ ಹೆಸರು ನಿಹಾಲ್ ಯಾನೆ ದಾದ ಎಂಬುದು ಮಾತ್ರ ತನಿಖಾಧಿಕಾರಿಗಳಿಗೆ ತಿಳಿದಿದೆ.

ಗೌರಿ ಹತ್ಯೆ ಪ್ರಕರಣವನ್ನು ಭೇದಿಸುತ್ತಿರುವ ಸಿಟ್, ಈ ಹಿಂದೆ ಸ್ಥಳ ಮಹಜರು ಮಾಡಲು, ಹತ್ಯೆಯ ತರಬೇತಿ ಸ್ಥಳ ಹಾಗೂ ಅವರು ತಂಗಿದ್ದ ಸ್ಥಳಗಳಿಗೆಲ್ಲಾ ಆರೋಪಿಗಳನ್ನು ಕರೆದುಕೊಂಡೂ ಹೋಗಿದ್ದರು. ಮತ್ತೊಂದು ಕಡೆ ಆರೋಪಿ ವಾಗ್ಮೋರೆಯನ್ನು ಬಂಧಿಸಿರುವ ಸಿಟ್, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರೂ ಸಹ ಬೈಕ್ ಸವಾರ ಅಥವಾ ಹತ್ಯೆಯ ಪ್ರಮುಖ ಆರೋಪಿ ಪತ್ತೆಯಾಗಿಲ್ಲ. 

ಇನ್ನು, ಎಲ್ಲ ಆಯಾಮಗಳಲ್ಲಿ ಕಳೆದೊಂದು ವರ್ಷದಿಂದ ಸಿಟ್ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಮುಖ ಆರೋಪಿಯನ್ನು ಸಿಟ್ ಬಂಧಿಸಿದ್ದೇ ಆದಲ್ಲಿ ಇಡೀ ಪ್ರಕರಣ ಮತ್ತಷ್ಟು ಗಟ್ಟಿಯಾಗಲಿದೆ. ಏಕೆಂದರೆ ಆ ಒಬ್ಬ ದಾದಾ ಎಲ್ಲಾ ಆರೋಪಿಗಳಿಗೆ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಅಷ್ಟೇ ಮಾತ್ರವಲ್ಲದೆ, ಈತ ಗೌರಿ ಹಂತಕನ ಜತೆ ಬೈಕ್‌ನಲ್ಲಿ ಬಂದಿದ್ದವನಾಗಿದ್ದು, ಹಂತಕರಿಗೆ ಪಿಸ್ತೂಲು ಪೂರೈಕೆ ಹಾಗೂ ಧನಸಹಾಯ ಮಾಡಿ ಹಾಗೂ ಅವರಿಗೆ ತಂಗಲು ಸ್ಥಳಗಳನ್ನೂ ನೀಡುತ್ತಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News