ಮಂಡ್ಯ: ಪ್ರತ್ಯೇಕ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ

Update: 2018-08-12 14:39 GMT

ಮಂಡ್ಯ, ಆ.12: ಶನಿವಾರ ತಡರಾತ್ರಿ ಹಾಗೂ ರವಿವಾರ ಮುಂಜಾನೆ ನಡೆದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟು, ನಾಲ್ಕು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.

ಮಂಡ್ಯ ತಾಲೂಕು ಹೊಳಲು ಗ್ರಾಮದ ಪ್ರಮೋದ್, ಮಲ್ಲಿಗೆರೆಯ ಪ್ರವೀಣ್, ಕೀಲಾರ ಗ್ರಾಮದ ಶಿವಕುಮಾರ್ ಹಾಗೂ ಬೆಂಗಳೂರಿನ ಉಮೇಶ್ ಸಾವನ್ನಪ್ಪಿದವರು.

ಮಂಡ್ಯ ವರದಿ: ಭಾನುವಾರ ಬೆಳ್ಳಂಬೆಳಗ್ಗೆ ನಗರದ ಹೊರವಲಯದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ತಾಲೂಕಿನ ಹೊಳಲು ಗ್ರಾಮದ ಪ್ರಮೋದ್ ಹಾಗೂ ಮಲ್ಲಿಗೆರೆ ಗ್ರಾಮದ ಯುವಕರು ಸಾವನ್ನಪ್ಪಿದ್ದು, ವಾಹನಕ್ಕೆ ಸಿಲುಕಿದ ಇಬ್ಬರ ದೇಹಗಳು ಛಿದ್ರಛಿದ್ರವಾಗಿದ್ದು, ಮಾಂಸದ ತುಂಡುಗಳು ಚೆಲ್ಲಾಪಿಲ್ಲಿಯಾಗಿದ್ದವು.

ಯುವಕರು ತೆರಳುತ್ತಿದ್ದ ಬೈಕ್‍ಗೆ ಲಾರಿ ಢಿಕ್ಕಿಯೊಡೆದು ಸುಮಾರು 250 ಮೀಟರ್ ವರೆಗೆ ಬೈಕ್ ಸವಾರರನ್ನು ಎಳೆದುಕೊಂಡು ಹೋಗಿದೆ. ಪರಿಣಾಮ ಸವಾರಿಬ್ಬರ ದೇಹ ಚಿಕ್ಕ ಚಿಕ್ಕ ಮಾಂಸದ ತುಂಡುಗಳಗಾಗಿ ಛಿದ್ರ ಛಿದ್ರಗೊಂಡಿತ್ತು ಎನ್ನಲಾಗಿದೆ. ಅಪಘಾತ ಸ್ಥಳದಿಂದ ಲಾರಿಯಿಂದ ಜಿಗಿದು ಗದ್ದೆ ಬಯಲಿನಲ್ಲಿ ಪರಾರಿಯಾಗುತ್ತಿದ್ದ ಚಾಲಕನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಅಪಘಾತದಿಂದ ಅಸ್ತ್ಯವ್ಯಸ್ತಗೊಂಡಿದ್ದ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರವನ್ನು ಪೊಲೀಸರು ಸುಗಮಗೊಳಿಸಿದರು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ದೂರು ವರದಿ: ತಾಲೂಕಿನ ಬೆಸಗರಹಳ್ಳಿ ಈರೇಗೌಡನ ದೊಡ್ಡಿ ಸಮೀಪ ಶನಿವಾರ ತಡರಾತ್ರಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಹಾಗೂ ಕಾರು ನಡುವೆ  ಅಪಘಾತ ಸಂಭವಿಸಿ ಟ್ರ್ಯಾಕ್ಟರ್ ಚಾಲಕ ಸಾವನ್ನಪ್ಪಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೊಲೀಸ್ ಠಾಣೆಗೆ ತುಸು ದೂರದಲ್ಲೇ ಈ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಚಾಲಕ ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಶಿವಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮದ್ದೂರು ನಿವಾಸಿ ಎಂ.ಎನ್.ಧನಂಜಯ ತೀವ್ರವಾಗಿ ಗಾಯಗೊಂಡಿದ್ದಾರೆ. ಕೊಪ್ಪ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಹಾಗೂ ಮದ್ದೂರಿನಿಂದ ಬೆಸಗರಹಳ್ಳಿಗೆ ಬರುತ್ತಿದ್ದ ಕಾರು ನಡುವೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆಬದಿಗೆ ಉರುಳಿದಾಗ ಚಾಲಕ ಶಿವಕುಮಾರ್ ಇಂಜಿನ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟರೆ, ಕಾರು ಚಾಲಕ ಧನಂಜಯ ಗಂಭೀರ ಗಾಯಗೊಂಡರು. ಕಾರಿನಲ್ಲಿದ್ದ ಇತರರು ಪಾರಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಎಂ.ಎನ್.ಧನಂಜಯ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ಸೇರಿಸಲಾಗಿದೆ. ಬೆಸಗರಹಳ್ಳಿ ಠಾಣೆ ಪಿಎಸ್‍ಐ ಮೋಹನ್.ಡಿ. ಪಟೇಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಮದ್ದೂರು ಪಟ್ಟಣದ ಮಳವಳ್ಳಿ ರಸ್ತೆಯ ಟಿಎಪಿಸಿಎಂಎಸ್ ಗೋದಾಮು ಎದುರು ರಸ್ತೆ ವಿಭಜಕಕ್ಕೆ ಕಾರು ಢಿಕ್ಕಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಶನಿವಾರ ತಡರಾತ್ರಿ ನಡೆದಿದೆ.

ಬೆಂಗಳೂರು ಮೂಲದ ಉಮೇಶ್(50) ಮೃತಪಟ್ಟ ದುರ್ದೈವಿಯಾಗಿದ್ದು, ಕಾರಿನ ಚಾಲಕ ಮೋಹನ್‍ ಕುಮಾರ್ ತೀವ್ರಗಾಯಗೊಂಡಿದ್ದಾರೆ. ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ.

ಉಮೇಶ್ ಸೇರಿದಂತೆ ನಾಲ್ವರು ಬೆಂಗಳೂರಿನಿಂದ ಕಾರಿನಲ್ಲಿ ಮಹದೇಶ್ವರಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ಸಾಗುವ ವೇಳೆ ಈ ಅಪಘಾತ ಸಂಭವಿಸಿದ್ದು, ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News