ಕೊಡಗು: ಆ.13 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

Update: 2018-08-12 15:36 GMT

ಮಡಿಕೇರಿ,ಆ.12: ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಭಾರೀ ಮಳೆಯಾಗುವ ಸಂಭವ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಸೋಮವಾರ ಜಿಲ್ಲಾಡಳಿತ ರಜೆ ಘೋಷಿಸಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಭಾರತೀಯ ಹವಾಮಾನ ಇಲಾಖೆ ರವಿವಾರ ನೀಡಿರುವ ಮುನ್ಸೂಚನೆಯಂತೆ ಆ.13ರಂದು ಕೊಡಗು ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವ ಇರುವುದಾಗಿ ತಿಳಿಸಿದೆ. ಅದರಂತೆ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ.

ನದಿ ತಟದಲ್ಲಿ ವಾಸವಾಗಿರುವವರು ಸದಾ ಜಾಗೃತರಾಗಿರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಮರಗಳ ಕೆಳಗೆ ಮತ್ತು ಎತ್ತರವಾದ ಗುಡ್ಡ ಇರುವ ಪ್ರದೇಶಗಳಲ್ಲಿ ನಿಲ್ಲಬಾರದು ಹಾಗೂ ವಾಹನಗಳನ್ನು ನಿಲ್ಲಿಸಬಾರದು ಎಂದು ಸೂಚಿಸಲಾಗಿದೆ. ನದಿ ತೊರೆಗಳು ತುಂಬಿ ಸೇತುವೆ ಅಥವಾ ರಸ್ತೆಯ ಮೇಲೆ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿರುವಾಗ ಕಾಲ್ನಡಿಗೆ ಅಥವಾ ವಾಹನಗಳ ಮೂಲಕ ದಾಟಲು ಪ್ರಯತ್ನಿಸಬಾರದು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಸುರಕ್ಷತೆ ದೃಷ್ಟಿಯಿಂದ ನದಿ, ತೊರೆ, ಜಲಪಾತಗಳ ಮುಂತಾದವುಗಳ ಸಮೀಪ ತೆರಳದೆ ಸುರಕ್ಷಿತ ಸ್ಥಳಗಳಿಂದ ವೀಕ್ಷಿಸುವಂತೆ ಕೋರಲಾಗಿದೆ.

ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದ 24*7 ಕಾರ್ಯನಿರತ ಟೋಲ್‍ಫ್ರೀ ಸಹಾಯವಾಣಿ (ಕಂಟ್ರೋಲ್ ರೂಂ) ಸಂಖ್ಯೆ 08272-221077ನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.

ಹಾರಂಗಿ ನದಿ ಪಾತ್ರದವರಿಗೆ ಎಚ್ಚರಿಕೆ: ಹಾರಂಗಿ ಜಲಾನಯನ ಪ್ರದೇಶದಲ್ಲಿ ಸೋಮವಾರ ಭಾರೀ ಮಳೆಯಾಗುವ ನಿರೀಕ್ಷೆ ಇರುವುದರಿಂದ ಜಲಾಶಯದಿಂದ ಕ್ರೆಸ್ಟ್ ಗೇಟ್‍ಗಳ ಮೂಲಕ 35ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುವುದು. ಈ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿರುವ ನಿವಾಸಿಗಳು ಎಚ್ಚರದಿಂದಿರುವಂತೆ ಹಾರಂಗಿ ಜಲಾಶಯದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News