ಆಲಮಟ್ಟಿ ಜಲಾಶಯಕ್ಕೆ ಬಾಗಿನ ಕಾರ್ಯಕ್ರಮ ಮುಂದೂಡಿಕೆ: ಸಚಿವ ಶಿವಾನಂದ ಪಾಟೀಲ್

Update: 2018-08-12 15:38 GMT

ಬಾಗಲಕೋಟೆ, ಆ.12: ಹುಬ್ಬಳ್ಳಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್ ಹವಾಮಾನ ವೈಪರಿತ್ಯದಿಂದಾಗಿ ಹಾರಾಡಲು ಅನುಮತಿ ಸಿಗದ ಕಾರಣ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ಗಂಟೆಗಳಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಲ್ಲಿಗೆ ಆಗಮಿಸಲು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ ಎಂದರು. ಕುಮಾರಸ್ವಾಮಿ ಊಟ ಕೂಡ ಮಾಡಿಲ್ಲ. ಹುಬ್ಬಳ್ಳಿಯಲ್ಲಿ ಭಾರಿ ಮಳೆ ಹಾಗೂ ಈ ಭಾಗದಲ್ಲಿ ಹವಾಮಾನ ವೈಪರಿತ್ಯದ ಕಾರಣ ಹೆಲಿಕಾಪ್ಟರ್ ಹಾರಾಟಕ್ಕೆ ಪೈಲಟ್ ಅನುಮತಿ ದೊರೆತಿಲ್ಲ. ಆದುದರಿಂದ, ಇಂದಿನ ಕಾರ್ಯಕ್ರಮವನ್ನು ಅನಿವಾರ್ಯವಾಗಿ ಮುಂದೂಡಲಾಗುತ್ತಿದೆ ಎಂದು ಅವರು ಹೇಳಿದರು.

ವಾಡಿಕೆಗಿಂತ ಒಂದು ತಿಂಗಳು ಮೊದಲೇ ಆಲಮಟ್ಟಿ ಜಲಾಶಯ ಮೈದುಂಬಿದ್ದು, ಕೃಷ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಕುಮಾರಸ್ವಾಮಿ ಆಯೋಜಿಸಿ ಕೊಂಡಿದ್ದರು. ಆದರೆ, ಮುಂಜಾನೆಯಿಂದ ಬಿರುಸುಗೊಂಡಿದ್ದ ಮಳೆಯಿಂದ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ಸಿಗದ ಕಾರಣ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಇಂದು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ ತಿಂಗಳಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಷ್ಟರೊಳಗೆ ಸ್ಥಳಿಯ ಸಂಸ್ಥೆ ಚುನಾವಣೆ ನೀತಿಸಂಹಿತೆಯೂ ಪೂರ್ಣಗೊಳ್ಳಲಿದೆ. ಬಾಗಿನ ಅರ್ಪಿಸುವ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಶಿವಾನಂದ ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News