×
Ad

ಕೆ-ಶಿಫ್ ಕಚೇರಿ ಹಾಸನಕ್ಕೆ ಸ್ಥಳಾಂತರ ಸಲ್ಲ: ಸಚಿವ ರಮೇಶ್ ಜಾರಕಿಹೊಳಿ

Update: 2018-08-12 21:18 IST

ಬೆಳಗಾವಿ, ಆ. 12: ಬೆಳಗಾವಿಯಲ್ಲಿದ್ದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಕೆ-ಶಿಫ್) ಕಚೇರಿಯನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಸನಕ್ಕೆ ಸ್ಥಳಾಂತರಿಸಿರುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಆಕ್ಷೇಪಿಸಿದ್ದಾರೆ.

ರವಿವಾರ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಚೇರಿಗಳನ್ನು ಸ್ಥಳಾಂತರಿಸುವ ವಿಷಯ ಮೂರು ತಿಂಗಳಿಂದಲೂ ಚರ್ಚೆಯಲ್ಲಿತ್ತು. ನಾವು ಅದನ್ನು ತಡೆದಿದ್ದೆವು. ಈಗ ಸ್ಥಳಾಂತರ ಮಾಡಲಾಗಿದೆ. ಅವುಗಳನ್ನು ಇಲ್ಲೇ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಾಲ್ಮೀಕಿ ಸಮಾಜಕ್ಕೆ ಇನ್ನೂ ಎರಡೂ ಸಚಿವ ಸ್ಥಾನ ಕೇಳುವುದಕ್ಕಾಗಿ ದಿಲ್ಲಿಗೆ ವರಿಷ್ಠರನ್ನು ಭೇಟಿಯಾಗಲು ಹೋಗಿದ್ದೆ. ಅದರಲ್ಲಿ ರಹಸ್ಯ ಕಾರ್ಯಾಚರಣೆ ಏನಿಲ್ಲ. ಸಮುದಾಯದ ಶಾಸಕರಾದ ನಾಗೇಂದ್ರ, ತುಕಾರಾಂ, ಪ್ರತಾಪ ಪಾಟೀಲ್ ಅಥವಾ ರಘುಮೂರ್ತಿ ಇದ್ದಾರೆ. ಅವರಲ್ಲಿ ಇಬ್ಬರಿಗೆ ಅವಕಾಶ ಕೇಳಿದ್ದೇನೆ. ಅಲ್ಲದೆ, ನಮ್ಮ ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ಕೋರಿದ್ದೇನೆ ಎಂದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದ ಅವರು, ಅಖಂಡ ಕರ್ನಾಟಕಕ್ಕೆ ನಮ್ಮ ಬೆಂಬಲವಿದೆ. ಬಿಜೆಪಿ ಶಾಸಕ ಉಮೇಶ ಕತ್ತಿ ವಾದಕ್ಕೆ ವಿರೋಧವಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎನ್ನುವವರು ಬಜೆಟ್ ಪುಸ್ತಕವನ್ನು ಸರಿಯಾಗಿ ಓದಿಕೊಳ್ಳಲಿ ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News