ಮಂಡ್ಯ: ರಾಜ್ಯಮಟ್ಟದ ಕವಿಕಾವ್ಯ ಮೇಳ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ

Update: 2018-08-12 16:15 GMT

ಮಂಡ್ಯ, ಆ.12: ದಶಕಗಳ ಮಾಧ್ಯಮ ಲೋಕ ಮತ್ತು ಪ್ರಸ್ತುತ ಮಾಧ್ಯಮ ಲೋಕವನ್ನು ತಾಳೆ ಹಾಕಿ ನೋಡಿದರೆ ಈಗ ಮಾಧ್ಯಮಗಳ ನಿಲುವು ಬಹಳ ಬದಲಾವಣೆಯಾಗಿದೆ ಎಂದು ಟಿವಿ5 ಸುದ್ದಿವಾಹಿನಿ ಸಹಾಯಕ ಸಂಪಾದಕ ಶಿವು ಬೆಸಗರಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಂಧಿಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ, ಕವಿಮಿತ್ರ ಕೂಟ ಹಾಗೂ ಸ್ಥಳೀಯ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ರವಿವಾರ ನಡೆದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಕಾವ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಾಧ್ಯಮಗಳು ಸುದ್ದಿಯನ್ನು ವೇಗವಾಗಿ ಕೊಡಲು ಯತ್ನಿಸುವ ಜತೆಗೆ ತಪ್ಪುಗಳನ್ನು ನೇರವಾಗಿ ಹೇಳುತ್ತಿವೆ. ಇದರಲ್ಲಿ ಸಣ್ಣಪುಟ್ಟ ತಪ್ಪಾಗಿರಬಹುದು. ಅದನ್ನು ಜನ ನೇರವಾಗಿ ಪ್ರಶ್ನಿಸುತ್ತಾರೆ. ಆದರೆ, ದೃಶ್ಯ ಮಾಧ್ಯಮಗಳು ಟಿಆರ್‍ಪಿ ಸ್ಪರ್ಧೆ ಎದುರಿಸಬೇಕಾಗಿದೆ ಎಂದರು. ಪಂಪ, ರನ್ನ, ಕುಮಾರವ್ಯಾಸನ ಸಾಹಿತ್ಯಕ್ಕೆ ಒಂದು ಇತಿಹಾಸವಿತ್ತು. ಪ್ರಸ್ತುತ ಸಾಹಿತ್ಯಗಳು ಬಂಡಾಯ ಹಾಗೂ ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಸಮಾಜದ ಅನಾಚಾರಗಳು ಪ್ರಸ್ತುತ ಸಾಹಿತ್ಯದ ಮೂಲಕ ಹೊರಬರುತ್ತಿದೆ ಎಂದು ಅವರು ವಿಶ್ಲೇಷಿಸಿದರು.

ಇತ್ತೀಚಿನ ಸಾಹಿತ್ಯದಲ್ಲಿ ಎಡಪಂಥೀಯ ಹಾಗೂ ಬಲಪಂಥೀಯ ಎಂಬುದು ಹೆಚ್ಚಾಗಿ ಕಾಣಿಸುತ್ತಿದೆ. ಸಾಹಿತ್ಯದಲ್ಲಿ ಎಡಪಂಥೀಯ ಹಾಗೂ ಬಲಪಂಥೀಯ ಅನ್ನೋದಕ್ಕಿಂತ ಹೆಚ್ಚಾಗಿ ಸರಿ ತಪ್ಪುಗಳನ್ನು ಹೆಚ್ಚಾಗಿ ನಾವು ಹುಡುಕಬೇಕು. ಸಾಹಿತ್ಯ ಲೋಕ ಉತ್ತಮ ಮಾರ್ಗದಲ್ಲಿ ದೊಡ್ಡ ಹೆಸರು ಮಾಡಬೇಕು ಎಂದು ಅವರು ಅಭಿಪ್ರಾಯಿಸಿದರು.

ಕವಿಕಾವ್ಯಮೇಳ ಸಮ್ಮೇಳನಾಧ್ಯಕ್ಷೆ ಎನ್.ಆರ್.ಮಂಜುಳಾ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಪುರುಷರಷ್ಟೇ ಮಹಿಳೆಯರು ಸಾಧನೆ ಮಾಡಿದ್ದಾರೆ. ಒಂದು ಕಾಲದಲ್ಲಿ ಮಹಿಳಾ ಸಾಹಿತ್ಯವೆಂದರೆ ಅದು ಅಡುಗೆ ಮನೆಯ ಸಾಹಿತ್ಯ ಎಂಬ ವ್ಯಂಗ್ಯವಿತ್ತು. ಆದರೆ, ಇದೀಗ ಅದು ಬದಲಾವಣೆ ಕಂಡಿದೆ ಎಂದರು.
ಸಾಹಿತ್ಯ ಲೋಕದಲ್ಲಿ ಅನೇಕರು ಪ್ರಜ್ವಲಿಸಿದ್ದಾರೆ. 12ನೇ ಶತಮಾನದ ಅಕ್ಕಮಹಾದೇವಿ ವಚನಗಳು ಇಂದಿಗೂ ಪ್ರಸ್ತುತವಾಗಿದೆ. ದಾಸ ಸಾಹಿತ್ಯದಲ್ಲೂ ಹಳವಿನಕಟ್ಟೆ ಗಿರಿಯಮ್ಮ ಭೀಮವ್ವ, ಸಂಚಿ ಹೊನ್ನಮ್ಮ ಅನೇಕರು ಸಾಧನೆ ಮಾಡಿದ್ದಾರೆ ಎಂದು ಅವರು ಪ್ರಸ್ತಾಪಿಸಿದರು.

ಸಮಾಜದಲ್ಲಿ ಹೆಣ್ಣುಭ್ರೂಣ ಹತ್ಯೆಗಳು ಕಡಿಮೆಯಾಗಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ತಡೆಯಲು ಉತ್ತಮ ಕಾನೂನು ರೂಪುಗೊಳ್ಳಬೇಕು. ಮಹಿಳೆಯರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪತ್ರಕರ್ತ ಶಿವು ಬೆಸಗರಹಳ್ಳಿ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ, ವೈದ್ಯ ಡಾ.ಮಾದೇಶ್, ಮನ್‍ಮುಲ್ ಮಾಜಿ ಅಧ್ಯಕ್ಷ ಚಿಕ್ಕೋನಹಳ್ಳಿ ತಮ್ಮಯ್ಯ, ಸಾಹಿತಿ ಕೆ.ಆರ್.ಪೇಟೆ ಆನಂದ್, ಶಿಕ್ಷಕ ಮಂಜು, ಸಮಾಜ ಸೇವಕಿ ಹೇಮಾ, ಲೇಖಕಾರದ ರತ್ನ, ದೊ.ಚಿ.ಗೌಡ, ಗಾಯಕಿ ಶ್ರೇಯಾ, ಕಿರಣ್ ಕುಮಾರ್, ಪುಟ್ಟೇಗೌಡ, ಚಿನಕುರಳಿ ರಮೇಶ್, ಲೋಕೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ಕವಿಗಳು ಕವನ ವಾಚಿಸಿದರು. ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್, ಪಾಂಡವಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಲುವೇಗೌಡ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News