ಮಂಡ್ಯ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಚಿವ ಸಿ.ಎಸ್.ಪುಟ್ಟರಾಜು

Update: 2018-08-12 16:17 GMT

ಮಂಡ್ಯ, ಆ.12: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿದ್ದು, ಶೀಘ್ರ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಭರವಸೆ ನೀಡಿದ್ದಾರೆ.

ನಾಡಪ್ರಭು ಕೆಂಪೇಗೌಡ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರವಿವಾರ ನಡೆದ ಕೆಂಪೇಗೌಡ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಶಾಸಕರೊಟ್ಟಿಗೆ ಚರ್ಚಿಸಿ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು ಎಂದರು.

ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರವಹಿಸಿಕೊಂಡ ನಂತರ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿವೆ. ರೈತನ ಬದುಕು ಹಸನಾಗುವ ನಿರೀಕ್ಷೆ ಸರಕಾರದ್ದಾಗಿದೆ. ಮೂರು ವರ್ಷಗಳಿಂದ ಬರದಿಂದ ತತ್ತರಿಸಿದ್ದ ಮಂಡ್ಯ ಜಿಲ್ಲೆಯಲ್ಲಿ ವರ್ಷಧಾರೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಅವರು ಹೇಳಿದರು.

ಕಾವೇರಿ ವ್ಯಾಪ್ತಿಯ ಎಲ್ಲಾ ಜಲಾಶಯಗಳು ತುಂಬಿಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬತ್ತ ಬೆಳೆಯಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಿನ್ನೆಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭತ್ತದ ನಾಟಿಗೆ ಚಾಲನೆ ನೀಡುವ ಮೂಲಕ ರೈತರೊಟ್ಟಿಗೆ ನಾವಿದ್ದೇವೆಂಬ ಸಂದೇಶ ನೀಡಿದ್ದಾರೆ ಎಂದು ಅವರು ನುಡಿದರು. 

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಬೆಂಗಳೂರಿನ ನಿರ್ಮಾತೃ ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ವಿಜಯನಗರ ಅರಸರಿಗೆ ಪ್ರಸ್ತಾವನೆ ಸಲ್ಲಿಸಿದರು. ಅದಕ್ಕೆ ವಿಜಯನಗರದ ಅರಸರು ಮೊದಲು ಅನುಮತಿ ನೀಡಲಿಲ್ಲ. ಆದರೆ, ಕೆಂಪೇಗೌಡರು ಪಟ್ಟುಹಿಡಿದಾಗ ಷರತ್ತಿನ ಮೇಲೆ ಅನುಮತಿ ಕೊಡುತ್ತಾರೆ. ಷರತ್ತು ಅಂದರೆ ನಗರ ನಿರ್ಮಾಣಕ್ಕೂ ಮುನ್ನ ಕೆರೆಗಳನ್ನು ಕಟ್ಟಬೇಕು ಎಂದು ಆದೇಶಿಸುತ್ತಾರೆ. ಅದರಂತೆ ಕೆಂಪೇಗೌಡರು ಸುಮಾರು 67 ಕೆರೆಗಳನ್ನು ನಿರ್ಮಿಸಿದರು ಎಂದು ವಿವರಿಸಿದರು. 

ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ತೂಬಿನಕೆರೆ ರಾಮಲಿಂಗಯ್ಯ, ಗ್ರಾಪಂ ಅಧ್ಯಕ್ಷೆ ಶೃತಿ ಶಿವಣ್ಣ,  ಸದಸ್ಯೆ ಗೀತಾ ಚಿಕ್ಕರಾಮನಾಯ್ಕ, ಸಂಘದ ಅಧ್ಯಕ್ಷ ಮಹೇಶ್‍ಗೌಡ, ಉಪಾಧ್ಯಕ್ಷ ಬೋರೇಗೌಡ, ಕಾರ್ಯದರ್ಶಿ ಶಿವಕುಮಾರ್, ಪದಾಧಿಕಾರಿಗಳಾದ ವೈ.ಡಿ.ಶಂಕರೇಗೌಡ, ಕುಮಾರ್ ಜೀಗುಂಡಿಪಟ್ಟಣ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News