ನನಗೆ ಇಂದಿಗೂ ಸಿದ್ದರಾಮಯ್ಯ ಅವರೇ ಸಿಎಂ: ಸಚಿವ ಪುಟ್ಟರಂಗಶೆಟ್ಟಿ
ದಾವಣಗೆರೆ,ಆ.12: ಜಾತಿ ಸಮೀಕ್ಷೆ ವರದಿ ಬಿಡುಗಡೆ ಕುರಿತು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.
ಭಾನುವಾರ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಬೀರೇಶ್ವರ ವಿದ್ಯಾವರ್ಧಕ ಸಂಘ ತಾಲೂಕು ಸಂಘಗಳ ಘಟಕಗಳ ಆಶ್ರಯದಲ್ಲಿ ಶ್ರೀ ಬೀರೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಶಾಲೆ ಮತ್ತು ವಸತಿ ನಿಲಯದ ಶಿಲಾನ್ಯಾಸ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸಚಿವರು ಮತ್ತು ಶಾಸಕರುಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿ ಗಣತಿ ಮಾಡಿದ್ದರು. ಆದರೆ, ಜಾತಿಗಣತಿ ಸಮೀಕ್ಷೆ ಬಿಡುಗಡೆ ಮಾಡುವ ಅಧಿಕಾರಿ ನನ್ನ ಕೈಯಲ್ಲಿಲ್ಲ. ಆದ್ದರಿಂದ ಇದನ್ನು ಹೊರತರುವ ವಿಚಾರದಲ್ಲಿ ಸಿಎಂ ಜೊತೆ ಚರ್ಚಿಸಿ, ಶೀಘ್ರ ವರದಿ ಅನುಷ್ಠಾನಗೊಳಿಸಿ ಎಲ್ಲಾ ವರ್ಗದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಸಿದ್ದರಾಮಯ್ಯ ಅವರೇ ಸಿಎಂ !
ರಾಜ್ಯಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ. ಆದರೆ, ನನಗೆ ಇಂದಿಗೂ ಸಿದ್ದರಾಮಯ್ಯ ಅವರೇ ಸಿಎಂ. ಹಿಂದುಳಿದ ವರ್ಗದ ನನ್ನನ್ನು ಗುರುತಿಸಿ ಬೆಳೆಸಿದ ಕಾರಣದಿಂದ ಇಂದು ನಾನು ಸಚಿವ ಸ್ಥಾನದಲ್ಲಿದ್ದೇನೆ. ದೇವರಾಜು ಅರಸು ಅವರ ಕಾಲದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಿದ್ದು, ನಂತರ ಸಿದ್ದರಾಮಯ್ಯ ಕಾಲದಲ್ಲಿ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಾಕಷ್ಟು ಅನುಕೂಲ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಸಚಿವ ಬಂಡೆಪ್ಪ ಕಾಂಶಪುರ್ ಮಾತನಾಡಿ, 17 ಸಾವಿರ ಕೋಟಿ ರೂ. ಸಹಕಾರಿ ಇಲಾಖೆಗಳ ಸಾಲ ಸೇರಿ ಒಟ್ಟು 50 ಸಾವಿರ ಕೋಟಿ ರೂ. ರಾಜ್ಯದ ರೈತರ ಸಾಲ ಮನ್ನಾ ಮಾಡುವ ಮೂಲಕ ನಮ್ಮದು ರೈತಪರ ಸರ್ಕಾರವೆಂಬುದನ್ನು ಸಿಎಂ ಕುಮಾರಸ್ವಾಮಿ ರುಜುವಾತುಪಡಿಸಿದ್ದಾರೆ ಎಂದರು.
ಸಹಕಾರ ಕೇವಲ ಕ್ಷೀರ ಹಾಗೂ ಬ್ಯಾಂಕ್ ಉದ್ಯಮಕ್ಕೆ ಮಾತ್ರವಲ್ಲ. ಎಲ್ಲಾ ಉದ್ದಿಮೆ ಕ್ಷೇತ್ರಗಳಲ್ಲಿ ಕೋಆಪರೇಟಿವ್‍ಗಳು ರೂಪಗೊಂಡಾಗ ಮಾತ್ರ ವಿವಿಧ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವೆಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಸಿದ್ದರಾಮಯ್ಯ ಒಬ್ಬ ಧೀಮಂತ ನಾಯಕ. ಇಂತಹ ಸಮಾಜದ ನಾಯಕ ಸಿದ್ದರಾಮಯ್ಯ ತನ್ನ ಆಡಳಿತ ಅವಧಿಯಲ್ಲಿ ರೈತರ, ಅಸಹಾಯಕರ, ಬಡವ, ಎಸ್ಸಿ-ಎಸ್ಟಿಗೆ ಈ ಹಿಂದೆ ಯಾರೂ ಮಾಡದಷ್ಟು ಸಹಾಯ, ಅಭಿವೃದ್ಧಿ ಮಾಡಿದ್ದಾರೆ. ಹಾಗಾಗಿ, ಮುಂದೆಯೂ ಅವರೇ ಸಿಎಂ ಆಗುವುದು ನಿಶ್ಚಿತ ಎಂದರು.
ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ನೂತನ ಸಚಿವ, ಶಾಸಕರನ್ನು ಗೌರವಿಸಲಾಯಿತು ಹಾಗೂ ಅಂಧ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆಂಗೋಹನುಮಂತಪ್ಪ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಕೆ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು.
ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್. ಶಂಕರ್, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ್, ವಿಪ ಸದಸ್ಯ ಎಚ್.ಎಂ. ರೇವಣ್ಣ, ಮೇಯರ್ ಶೋಭಾ ಪಲ್ಲಾಗಟ್ಟೆ, ಜಿಪಂ ಅಧ್ಯಕ್ಷೆ ಕೆ. ಜಯಶೀಲಾ, ಡಾ. ಲೋಕೇಶ್ ಒಡೆಯರ್, ಡಾ. ಉದಯಶಂಕರ್ ಒಡೆಯರ್, ಮೋಹನ್ ಕೊಂಡಜ್ಜಿ, ಮಾಜಿ ಮೇಯರ್ ಗೋಣೆಪ್ಪ, ಎಚ್.ಬಿ. ಮಂಜಪ್ಪ, ಎನ್. ನಾಗಣ್ಣ, ಕೆ.ಪಿ. ಸಿದ್ದಬಸಪ್ಪ, ಸಿದ್ದಪ್ಪ ಅಡಾಣಿ, ಸೈಫುಲ್ಲಾ ಇತರರು ಇದ್ದರು.