ಮಲೆನಾಡಲ್ಲಿ ಧಾರಾಕಾರ ವರ್ಷಧಾರೆ: ಪ್ರಮುಖ ನದಿಗಳ ಹರಿವಿನಲ್ಲಿ ಏರಿಕೆ

Update: 2018-08-12 17:09 GMT

ಶಿವಮೊಗ್ಗ, ಆ.12: ಮಲೆನಾಡಲ್ಲಿ ಆಶ್ಲೇಷ ಮಳೆಯ ಅಬ್ಬರ ಮುಂದುವರೆದಿದೆ. ಭಾನುವಾರ ಕೂಡ ಜಿಲ್ಲೆಯಾದ್ಯಂತ ಉತ್ತಮ ವರ್ಷಧಾರೆಯಾಗುತ್ತಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಜಡಿಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರಮುಖ ನದಿಗಳ ಹರಿವಿನಲ್ಲಿ ಹೆಚ್ಚಳ ಕಂಡುಬಂದಿದ್ದು, ಡ್ಯಾಂಗಳ ಒಳಹರಿವಿನಲ್ಲಿ ಏರಿಕೆಯಾಗಿದೆ. 

ಭಾನುವಾರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಘಟ್ಟ ಪ್ರದೇಶದವಾದ ಹುಲಿಕಲ್‍ನಲ್ಲಿ ಅತ್ಯದಿಕ 170 ಮಿ.ಮೀ. ಮಳೆಯಾಗಿದೆ. ಮಾಸ್ತಿಕಟ್ಟೆಯಲ್ಲಿ 160 ಮಿ.ಮೀ., ಯಡೂರಿನಲ್ಲಿ 160 ಮಿ.ಮೀ., ಮಾಣಿಯಲ್ಲಿ 155 ಮಿ.ಮೀ. ಹಾಗೂ ಆಗುಂಬೆಯಲ್ಲಿ 85 ಮಿ.ಮೀ. ಮಳೆಯಾಗಿದೆ. 

ಉಳಿದಂತೆ ತಾಲೂಕು ಕೇಂದ್ರಗಳಾದ ಶಿವಮೊಗ್ಗದಲ್ಲಿ 6.3 ಮಿ.ಮೀ., ಭದ್ರಾವತಿಯಲ್ಲಿ 8.6 ಮಿ.ಮೀ., ತೀರ್ಥಹಳ್ಳಿಯಲ್ಲಿ 52.4 ಮಿ.ಮೀ., ಶಿಕಾರಿಪುರದಲ್ಲಿ 7.2 ಮಿ.ಮೀ., ಸಾಗರದಲ್ಲಿ 31 ಮಿ.ಮೀ., ಸೊರಬದಲ್ಲಿ 35.5 ಮಿ.ಮೀ. ಹಾಗೂ ಹೊಸನಗರ ತಾಲೂಕು ಕೇಂದ್ರದಲ್ಲಿ 73.6 ಮಿ.ಮೀ. ಮಳೆಯಾಗಿದೆ. 

ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಪ್ರಮುಖ ಡ್ಯಾಂಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಲಿಂಗನಮಕ್ಕಿ ಡ್ಯಾಂನ ಒಳಹರಿವು 25,504 ಕ್ಯೂಸೆಕ್ ಇದ್ದು, 3308 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 1811.60 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1784.45 ಅಡಿಯಿತ್ತು. 

ಭದ್ರಾ ಹಾಗೂ ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟ ತಲುಪಿವೆ. ಭದ್ರಾ ಡ್ಯಾಂನ ಒಳಹರಿವು 15,800 ಕ್ಯೂಸೆಕ್ ಇದ್ದು 16,101 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ತುಂಗಾ ಡ್ಯಾಂನ ಒಳಹರಿವು 29,758 ಕ್ಯೂಸೆಕ್ ಇದ್ದು ಅಷ್ಟೆ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಉಳಿದಂತೆ ಮಾಣಿ ಡ್ಯಾಂನ ನೀರಿನ ಮಟ್ಟ 1936.84 (ಗರಿಷ್ಠ ಮಟ್ಟ : 1952) ಅಡಿಯಿದೆ. 3914 ಕ್ಯೂಸೆಕ್ ಒಳಹರಿವಿದೆ. 

ಏರಿಕೆ: ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ನದಿಗಳಾದ ಶರಾವತಿ, ತುಂಗಾ, ಭದ್ರಾ, ಕುಮದ್ವತಿ, ದಂಡಾವತಿ, ಮಾಲತಿ ಸೇರಿದಂತೆ ಸಣ್ಣಪುಟ್ಟ ಹೊಳೆಗಳು ಮೈದುಂಬಿ ಹರಿಯಲಾರಂಭಿಸಿದೆ. ಜಡಿ ಮಳೆ ಮುಂದುವರೆದರೆ ಕೆಲ ನದಿಗಳು ಪ್ರವಾಹ ಸೃಷ್ಟಿಸುವ ಆತಂಕವೂ ಎದುರಾಗಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News