ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ: ಮಾಜಿ ಸಚಿವ ವಿ.ಸೋಮಣ್ಣ

Update: 2018-08-12 17:24 GMT

ತುಮಕೂರು,ಆ.12: ಯಾರು ಎಷ್ಟೇ ಕುತಂತ್ರ ನಡೆಸಿದರೂ 2019ರ ಲೋಕಸಭಾ ಚನಾವಣೆಯ ನಂತರ ನರೇಂದ್ರಮೋದಿ ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತುಮಕೂರು ನಗರ ಘಟಕ ಆಯೋಜಿಸಿದ್ದ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಪ್ರತಿಯೊಬ್ಬ ಭಾರತೀಯನು ಪ್ರಧಾನ ಮಂತ್ರಿಯವರ ಕಾರ್ಯವೈಖರಿಯ ಬಗ್ಗೆ ಹೆಮ್ಮೆ ಮತ್ತು ವಿಶ್ವಾಸವನ್ನು ಹೊಂದಿದ್ದಾರೆ ಎಂದರು.

ತುಮಕೂರು ನಗರದ ಚಿತ್ರಣ ಬದಲಾಗಬೇಕಿದೆ. ಕಾರ್ಯಕರ್ತರ ಪಕ್ಷವಾದ ಬಿಜೆಪಿಯಲ್ಲಿ ಅಕಾಂಕ್ಷಿಗಳ ಸಂಖ್ಯೆ ಸಹಜವಾಗಿ ದೊಡ್ಡದು. 35 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡುವ ಅವಕಾಶವಿರುವುದರಿಂದ ಕಾರ್ಯಕರ್ತರು ಒಮ್ಮತದ ಅಭ್ಯರ್ಥಿಯನ್ನು ಕಣಕಿಳಿಸಿ ನಾವೇ ಅಭ್ಯರ್ಥಿಯೆಂಬಂತೆ ಚುನಾವಣೆ ಮಾಡಬೇಕೆಂದ ಅವರು, ಈ ಬಾರಿ 50% ಮಹಿಳಾ ಮೀಸಲಾತಿ ಜಾರಿಯಾಗಿರುವುದು ಸಂತಸದ ಸಂಗತಿ. ಈ ಮೀಸಲಾತಿ ಬರಲು ಬಿ.ಎಸ್. ಯಡಿಯೂರಪ್ಪನವರ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರಕಾರದ ಆಯಸ್ಸು ಕಡಿಮೆ. ಯಾವ ಕ್ಷಣದಲ್ಲಾದರೂ ಸರ್ಕಾರ ಪತನವಾಗಬಹುದು. ಮುಂದಿನ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ. ಕಾರ್ಯಕರ್ತರು ಅಲಸ್ಯಕ್ಕೆ ಒಳಗಾಗದೆ ಸ್ಥಳೀಯ ಸಂಸ್ಥೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ವಿ.ಸೋಮಣ್ಣ ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಟಿಕೆಟ್ ನೀಡುವ ವಿಚಾರದಲ್ಲಿ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಚುನಾವಣೆ ಕಮಿಟಿ ರಚಿಸಲಾಗುವುದು. ವಾರ್ಡ್ ಕಾರ್ಯಕರ್ತರ ಅಭಿಪ್ರಾಯ ಪಡೆದು ಚುನಾವಣೆ ಕಮಿಟಿ ತೀರ್ಮಾನದಂತೆ ಟಿಕೆಟ್ ನೀಡಲಾಗುವುದು ಎಂದರು.   

ಸಭೆಯಲ್ಲಿ ನಗರಧ್ಯಕ್ಷರಾದ ಸಿ.ಎನ್. ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಹೆಬ್ಬಾಕ, ಲಕ್ಷ್ಮೀಶ್, ನಗರ ಪ್ರಧಾನ ಕಾರ್ಯದರ್ಶಿ ಹೆಚ್,ಎನ್, ರವೀಶ್, ಮಾಜಿ ಶಾಸಕ ಗಂಗಹನುಮಯ್ಯ,ಬಾವಿಕಟ್ಟೆ ನಾಗಣ್ಣ, ರುದ್ರೇಶ್, ಕೃಷ್ಣಪ್ಪ, ಸ್ನೇಕ್ ನಂದೀಶ್, ರಮೇಶ್ ರೆಡ್ಡಿ, ಸಾಗರನಹಳ್ಳಿ ವಿಜಯ್ ಕುಮಾರ್, ಟಿ,ಆರ್, ಸದಾಶಿವಯ್ಯ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News