ಕೌಶಲ್ಯಭರಿತ ತಾಂತ್ರಿಕ ಪದವೀಧರರಿಗೆ ಅವಕಾಶಗಳ ಮಹಾಪೂರ: ಡಾ.ಜಿ.ಪರಮೇಶ್ವರ್

Update: 2018-08-12 17:32 GMT

ತುಮಕೂರು,ಆ.12: ಭಾರತ ಜಾಗತೀಕರಣಕ್ಕೆ ತೆರೆದುಕೊಂಡಂತೆ ವಿದ್ಯಾವಂತ, ಕೌಶಲ್ಯಭರಿತ ತಾಂತ್ರಿಕ ಪದವೀಧರರಿಗೆ ಅವಕಾಶಗಳ ಮಹಾಪೂರವೇ ಇದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಗೃಹ ಸಚಿವ ಹಾಗೂ ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಶ್ರೀಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ 40ನೇ ಬ್ಯಾಚ್‍ನ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ವಿದ್ಯಾರ್ಥಿ ದಿಸೆಯಲ್ಲಿ ತಾಳ್ಮೆ, ಶಿಸ್ತು, ಶ್ರದ್ದೆಯನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ, ಆದರ್ಶ ವ್ಯಕ್ತಿಗಳನ್ನು ಮಾದರಿಗಳಾಗಿ ಸ್ವೀಕರಿಸಿ ಎಂದು ಸಲಹೆ ನೀಡಿದರು.

ಪ್ರಸ್ತುತ ಪ್ರತಿಯೊಂದರಲ್ಲೂ ಹೊಸತನದ ತುಡಿತವಿದೆ. ಅದರಂತೆ ಭಾರತವೂ ಕೂಡ, ಶಿಕ್ಷಣ, ಕೈಗಾರಿಕೆ, ಆರೋಗ್ಯದ ವಿಷಯದಲ್ಲಿ ವೇಗವಾಗಿ ಸಾಗುತ್ತಿದೆ. ಈ ವೇಗದಲ್ಲಿ ಭವಿಷ್ಯದ ಇಂಜಿನಿಯರ್ ಗಳಾದ ನಿಮ್ಮ ಪಾತ್ರ ಕೂಡ ಬಹಳ ಮುಖ್ಯ. ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆ ನಿಮ್ಮ ಎಲ್ಲಾ ಅಗತ್ಯತೆಗಳನ್ನು ಪೂರೈಸಲಿದೆ ಎಂದು ಡಾ. ಜಿ.ಪರಮೇಶ್ವರ್ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾರುತಿ ಡಿ ಮಾಲೆ ವಹಿಸಿದ್ದರು. ಟಾಟ ಕಂಪನಿಯ ಎಸ್.ವಿ.ಎಸ್.ಪ್ರಸಾದ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಕೆ ವೀರಯ್ಯ ಡೀನ್ ಡಾ.ಸಿದ್ದಪ್ಪ, ಸಾಹೇ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ರಿಜಿಸ್ಟ್ರಾರ್ ಡಾ.ಕರುಣಾಕರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News