ಮಡಿಕೇರಿ: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಮಹಾಸಭೆ

Update: 2018-08-12 17:47 GMT

ಮಡಿಕೇರಿ ಆ.12: ಮಕ್ಕಳ ಹಿತವನ್ನು ಕಾಪಾಡುವುದರೊಂದಿಗೆ ಸರಕಾರ ವಹಿಸುವ ಇತರ ಕಾರ್ಯಗಳನ್ನು ಕೂಡ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ಬದುಕಿಗೆ ಯಾವುದೇ ಭದ್ರತೆ ಇಲ್ಲದೆ ಇರುವುದು ವಿಷಾದಕರವೆಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷ ಶಿವಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ವಾರ್ಷಿಕ ಮಹಾಸಭೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಿವಶಂಕರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿವೃತಿಗೊಂಡಾಗ ಕಾರ್ಯಕರ್ತೆಯರಿಗೆ 50 ಸಾವಿರ, ಸಹಾಯಕಿಯರಿಗೆ 30 ಸಾವಿರ ಇಡಿಗಂಟನ್ನು ನೀಡಲಾಗುತ್ತಿತ್ತು. ಆದರೆ ಈ ವ್ಯವಸ್ಥೆ ಈಗ ಸ್ಥಗಿತಗೊಂಡಿದೆ, ನಿವೃತ್ತಿಗೊಂಡ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮೆಡಿಕಲ್ ಕಾರ್ಡ್ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು, ಕನಿಷ್ಟ ವೇತನ 18,000 ರೂ. ಕಡ್ಡಾಯವಾಗಿ ನಿಗಧಿ ಮಾಡಬೇಕೆಂದು ಆಗ್ರಹಿಸಿದರು.

ಸರಕಾರ ಇತ್ತೀಚೆಗೆ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ವೇತನ ಹೆಚ್ಚು ಮಾಡಿರುವುದು ಮಾನವೀಯತೆಯ ಆಧಾರದಿಂದ ಅಲ್ಲ. ಬದಲಾಗಿ ನಮ್ಮ ಸಂಘಟನೆ ಮಾಡಿದ ಹೋರಾಟದ ಫಲ ಎಂದು ಶಿವಶಂಕರ್ ಅಭಿಪ್ರಾಯಪಟ್ಟರು. 

ಇಂದು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಆರ್ಥಿಕವಾಗಿ ಸಬಲರಾಗಬೇಕಿದೆ. ಇಂದು 8000 ಮಂದಿ ಕಾರ್ಯಕರ್ತೆಯರು, ಸಹಾಯಕಿಯರು ನಿವೃತ್ತಿ ಹೊಂದಿದ್ದಾರೆ. ಆದರೆ ಅವರಿಗೆ ಯಾವುದೇ ಸೌಲಭ್ಯಗಳು, ನಿವೃತಿ ವೇತನ ಸರಕಾರದಿಂದ ದೊರಕುತ್ತಿಲ್ಲ. ಸರಕಾರಗಳು ದುಡಿಯುವ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಚಿಂತನೆ ನಡೆಸುತ್ತಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಜಾಯಿಂಟ್ ಅಕೌಂಟ್ ಜಾರಿಯಾಗಬೇಕೆನ್ನುವ ಯೋಜನೆಯನ್ನು ಸರಕಾರ ಕೈಬಿಡಬೇಕೆಂದರು. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆ.16 ರಂದು ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿ ಸರಕಾರದ ಗಮನ ಸೆಳೆಯಬೇಕೆಂದು ಶಿವಶಂಕರ್ ಕರೆ ನೀಡಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೇಂದ್ರ ಸರಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಹೆಚ್ಚು ಮಾಡುವ ಕುರಿತು ಯಾವುದೇ ಚಿಂತನೆ ನಡೆಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸಂಘದ ಮೂಲಕ ಕರೆ ಬಂದಾಗ ಬದುಕಿನ ಭದ್ರತೆಗಾಗಿ ಪ್ರತಿಯೊಬ್ಬರು ಹೋರಾಟಕ್ಕೆ ಸಿದ್ಧರಾಗಿರಬೇಕು. ಕೊಡಗು ಜಿಲ್ಲೆ ಬೆಟ್ಟಗುಡ್ಡಗಳಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿನ ಜನರ ಸಮಸ್ಯೆಗಳನ್ನು ಅರಿತುಕೊಂಡು, ಇಲ್ಲಿಗೆ ಪೂರಕವಾಗಿ ಯೋಜನೆಗಳನ್ನು ಜಾರಿಗೊಳಿಸಬೇಕು. ಈ ಕುರಿತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಸೂಪರ್‍ವೈಸರ್ ಗಳ ಕೊರತೆ ಇದ್ದು ಶೀಘ್ರದಲ್ಲಿಯೇ ಶಾಶ್ವತ ಪರಿಹಾರ ಸಿಗಬೇಕಿದೆ. ಆದರೆ ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರು ಯಾರೊಬ್ಬರೂ ಕೇಂದ್ರ ಸರಕಾರದ ಗಮನ ಸೆಳೆದು ಅಂಗನವಾಡಿ ಸಿಬ್ಬಂದಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾರ್ಯ ಮಾಡುತ್ತಿಲ್ಲವೆಂದು ಟಿ.ಪಿ.ರಮೇಶ್ ಆರೋಪಿಸಿದರು.

ಸಂಘದ ಅಧ್ಯಕ್ಷೆ ವಿ.ಹೆಚ್.ನಾಗರತ್ನ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು.

ಜಿಲ್ಲಾಧ್ಯಕ್ಷೆ ತಾರಾಮಣಿ, ಕಾರ್ಯದರ್ಶಿ ಪುಪ್ಪಾವತಿ, ಖಜಾಂಜಿ ಗೀತಾ, ತಾಲ್ಲೂಕು ಕಾರ್ಯದರ್ಶಿ ಸುಮಿತ್ರಾ, ಪ್ರಧಾನ ಕಾರ್ಯದರ್ಶಿ ಪವಿತ್ರ ಸೇರಿದಂತೆ ಅಂಗನವಾಡಿ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News