ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮುಂಗಾರು ಮಳೆಯ ಅಬ್ಬರ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

Update: 2018-08-13 12:05 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಆ.13: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದೆ. ಎಡೆಬಿಡದೆ ಸುರಿಯುತ್ತಿರುವ ಜಡಿಮಳೆಯಿಂದ ಹಲವೆಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನದಿಗಳು ಮೈದುಂಬಿ ಹರಿಯಲಾರಂಭಿಸಿದ್ದು, ಮಲೆನಾಡಿನಲ್ಲಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಇದರಿಂದ ತಗ್ಗು ಪ್ರದೇಶಗಳು ಜಲಾವೃತವಾಗುವ ಭೀತಿ ಎದುರಾಗಿದೆ. 

ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರಗಳಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ, 54.54 ಮಿಲಿ ಮೀಟರ್ (ಮಿ.ಮೀ.) ಆಗಿದೆ. 

ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮಾಣಿಯಲ್ಲಿ ಅತ್ಯದಿಕ 208 ಮಿ.ಮೀ. ವರ್ಷಧಾರೆಯಾಗಿದೆ. ಮಾಸ್ತಿಕಟ್ಟೆಯಲ್ಲಿ 200 ಮಿ.ಮೀ., ಹುಲಿಕಲ್‍ನಲ್ಲಿ 195 ಮಿ.ಮೀ., ಯಡೂರಿನಲ್ಲಿ 178 ಮಿ.ಮೀ., ಚಕ್ರಾದಲ್ಲಿ 117 ಮಿ.ಮೀ., ಸಾವೇಹಕ್ಲುವಿನಲ್ಲಿ 162 ಮಿ.ಮೀ. ಮಳೆಯಾಗಿದೆ. 

ಉಳಿದಂತೆ ತಾಲೂಕು ಕೇಂದ್ರಗಳಾದ ಶಿವಮೊಗ್ಗದಲ್ಲಿ 20.60 ಮಿ.ಮೀ., ಭದ್ರಾವತಿಯಲ್ಲಿ 27.40 ಮಿ.ಮೀ., ತೀರ್ಥಹಳ್ಳಿಯಲ್ಲಿ 87.80 ಮಿ.ಮೀ., ಸಾಗರದಲ್ಲಿ 61.60 ಮಿ.ಮೀ., ಶಿಕಾರಿಪುರದಲ್ಲಿ 23.20 ಮಿ.ಮೀ., ಸೊರಬದಲ್ಲಿ 34.20 ಮಿ.ಮೀ. ಹಾಗೂ ಹೊಸನಗರದಲ್ಲಿ 127 ಮಿ.ಮೀ. ವರ್ಷಧಾರೆಯಾಗಿದೆ. 

ಡ್ಯಾಂ ವಿವರ: ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವಿನಲ್ಲಿ ಕ್ರಮೇಣ ಏರಿಕೆ ಕಂಡುಬರುತ್ತಿದೆ. ಪ್ರಸ್ತುತ 41,645 ಕ್ಯೂಸೆಕ್ ಒಳಹರಿವಿದ್ದು, 762 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ 1812.75 (ಗರಿಷ್ಠ ಮಟ್ಟ : 1819) ಅಡಿಯಿದೆ. 

ಉಳಿದಂತೆ ಭದ್ರಾ ಹಾಗೂ ತುಂಗಾ ಡ್ಯಾಂಗಳು ಈಗಾಗಲೇ ಗರಿಷ್ಠ ಮಟ್ಟ ತಲುಪಿವೆ. ಪ್ರಸ್ತುತ ಭದ್ರಾ ಡ್ಯಾಂನ ಒಳಹರಿವು 33,208 ಕ್ಯೂಸೆಕ್ ಇದ್ದು, 31,101 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ತುಂಗಾ ಡ್ಯಾಂನ ಒಳಹರಿವು 56,495 ಕ್ಯೂಸೆಕ್ ಇದ್ದು, 54,393 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 

ತುಂಗಾ ಹಾಗೂ ಭದ್ರಾ ಡ್ಯಾಂಗಳಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯಿರುವ ತುಂಗಾ ಹಾಗೂ ಭದ್ರಾ ನದಿಗಳ ಸಂಗಮ ಸ್ಥಳವಾದ ಕೂಡ್ಲಿಯ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ. 

ಅತೀವೃಷ್ಟಿ ಭೀತಿ
ಜೂನ್, ಜುಲೈ ರೀತಿಯಲ್ಲಿ ಆಗಸ್ಟ್ ನಲ್ಲಿಯೂ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಪ್ರಮುಖ ನದಿಗಳು, ಹಳ್ಳಕೊಳ್ಳಗಳು ಉಕ್ಕಿ ಹರಿಯಲಾರಂಭಿಸಿವೆ. ಇದರಿಂದ ಜಿಲ್ಲೆಯ ಹಲವೆಡೆ ಅತೀವೃಷ್ಟಿ ಭೀತಿ ಎದುರಾಗಿದೆ. ಜೊತೆಗೆ ಪ್ರವಾಹ ಸ್ಥಿತಿಯೂ ತಲೆದೋರಿದೆ. ಎಡಬಿಡದೆ ಬೀಳುತ್ತಿರುವ ಮಳೆಯಿಂದ ಮೆಕ್ಕೆಜೋಳ ಬೆಳೆಗಾರರಲ್ಲಿ ಬೆಳೆ ನಷ್ಟದ ಆತಂಕವೂ ಉಂಟಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News