ಕೊಪ್ಪ: ಅಕ್ರಮವಾಗಿ ಮರ ಕಡಿದ ಆರೋಪ; ಶಿಕ್ಷಕನ ಮೇಲೆ ಪ್ರಕರಣ ದಾಖಲು

Update: 2018-08-13 12:12 GMT

ಕೊಪ್ಪ, ಆ.13:  ಗ್ರಾಮ ಪಂಚಾಯತ್ ವಸತಿ ನಿಲಯದಲ್ಲಿ ವಾಸ್ತವ್ಯ ಹೊಂದಿದ್ದ ಶಾಲಾ ಶಿಕ್ಷಕರೊಬ್ಬರ ಮೇಲೆ ವಸತಿ ನಿಲಯದ ಪಕ್ಕದ ಹಲಸಿನ ಮರವನ್ನು ಅಕ್ರಮವಾಗಿ ಕಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿದ್ದಾರೆ.

ಕುದುರೆಗುಂಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಓಂಕಾರಪ್ಪ ಶಾಲೆಯ ಪಕ್ಕದಲ್ಲಿದ್ದ ವಸತಿ ನಿಲಯದಲ್ಲಿ ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದರೆ. ಮನೆಯ ಹಿಂದುಗಡೆ ಇದ್ದ ಹಲಸಿನ ಮರದಿಂದ ಒಣಗಿದ ಕೊಂಬೆಗಳು, ಹಲಸಿನ ಹಣ್ಣು ಮನೆಯ ಮಾಡಿನ ಮೇಲೆ ಬಿದ್ದು ಹಾನಿಯಾಗುತ್ತಿತ್ತು. ಮನೆಯ ಹಂಚುಗಳು ಪದೇ ಪದೇ ಒಡೆದು ಹೋಗುತ್ತಿತ್ತು. ಈ ಕುರಿತು ಗ್ರಾಮ ಸಭೆಯಲ್ಲಿ ವಿಚಾರ ತಿಳಿಸಿದ್ದರು ಎನ್ನಲಾಗಿದ್ದು ಗ್ರಾಮ ಸಭೆಯಲ್ಲಿ ಹಾಜರಿದ್ದ ಪಂಚಾಯತ್ ಸದಸ್ಯರು, ಅರಣ್ಯ ಇಲಾಖೆಯವರು ಮನೆಗೆ ತೊಂದರೆಯಾಗುತ್ತಿದ್ದ ಕೊಂಬೆಗಳನ್ನು ಕಡಿದು ತೆಗೆಯುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಆದರೆ ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸದೇ ಇದ್ದ ಕಾರಣ ಮನೆಗೆ ಹಾನಿಯಾಗುವುದನ್ನು ತಪ್ಪಿಸಲು ಕೆಲ ದಿನಗಳ ಹಿಂದೆ ತಾವೇ ಸ್ವತಃ ಮರವನ್ನು ಕಡಿದು ಹಾಕಿದ್ದಾರೆ ಎಂದು ತಿಳಿದುಬಂದಿದೆ. ಮರದ ಕೊಂಬೆ ತೆಗೆಯುವ ಬದಲು ಮರವನ್ನೇ ಕಡಿದು ಹಾಕಿರುವ ಶಿಕ್ಷಕರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಗ್ರಾಮಸ್ಥರು ಶನಿವಾರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಶಿಕ್ಷಕ ಓಂಕಾರಪ್ಪನವರ ಮೇಲೆ ಅಕ್ರಮವಾಗಿ ಮರ ಕಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಓಂಕಾರಪ್ಪನವರು ಜುಲೈ 10ರಂದು ನಡೆದಿದ್ದ ಗ್ರಾಮ ಸಭೆಯಲ್ಲಿ ಮರದಿಂದ ಆಗುತ್ತಿದ್ದ ತೊಂದರೆಯ ಬಗ್ಗೆ ಗಮನ ಸೆಳೆದಿದ್ದೆ. ಈ ಸಭೆಯಲ್ಲಿ ಗ್ರಾಮಸ್ಥರು, ಗ್ರಾಮ ಪಂಚಾಯತ್ ಸದಸ್ಯರು, ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೂ ಇದ್ದರು. ಗ್ರಾಮ ಸಭೆ ನಡೆದು ಒಂದು ವಾರ ಕಳೆದರೂ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹಲಸಿನ ಮರದಿಂದ ಪದೇ ಪದೇ ಮುರಿದ ಕೊಂಬೆಗಳು ಹಾಗೂ ಹಲಸಿನ ಕಾಯಿ, ಹಣ್ಣುಗಳು ಬೀಳುತ್ತಿದ್ದು ಹಂಚುಗಳು ಒಡೆದು ಹೋಗುತ್ತಿತ್ತು. ಮನೆಯಲ್ಲಿ ಸದಾ ಆತಂಕದಲ್ಲೇ ಇರಬೇಕಿತ್ತು. ಆದ್ದರಿಂದ ಮನೆಯ ಹಾಗೂ ಕುಟುಂಬದ ಸುರಕ್ಷತೆಯ ದೃಷ್ಠಿಯಿಂದ ಮರವನ್ನು ಕಡಿಯಬೇಕಾದ ಅನಿವಾರ್ಯತೆ ಉಂಟಾಯಿತು. ಕಾನೂನಿನ ಪ್ರಕಾರ ತಪ್ಪಾಗಿದ್ದರೆ ಅದಕ್ಕೆ ದಂಡ ತೆರುತ್ತೇನೆ ಎಂದರು.

ಅರಣ್ಯ ಇಲಾಖೆಯ ಆರ್‍ಎಫ್‍ಒ ಮಂಜುನಾಥ್ ಪ್ರತಿಕ್ರಿಯಿಸಿ ಇಲಾಖೆಯ ಗಮನಕ್ಕೆ ತರದೇ ಮರ ಕಡಿದಿರುವುದು ತಪ್ಪು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News