ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆಯ ಆರ್ಭಟ: ಜನಜೀವನ ಅಸ್ತವ್ಯಸ್ತ

Update: 2018-08-13 12:28 GMT

ಚಿಕ್ಕಮಗಳೂರು, ಆ.13: ಜಿಲ್ಲಾದ್ಯಂತ ವರುಣನ ಅಬ್ಬರ ಮಂದುವರೆದಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕಿನಾದ್ಯಂತ ರವಿವಾರ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವೆಡೆ ಮನೆಗಳು ಹಾಗೂ ಮರಗಳು ಧರೆಗುರುಳಿ ಅಪಾರ ನಷ್ಟ ಉಂಟಾಗಿದೆ.

ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ತರೀಕೆರೆ, ಕೊಪ್ಪ ಭಾಗದಲ್ಲಿ ಎಡಬಿಡದೆ ಮಳೆಯ ಜೊತೆಗೆ ಬಿರುಸಿನ ಗಾಳಿ ಬೀಸುತ್ತಿದೆ. ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ, ನದಿಗಳು ಸೇರಿದಂತೆ ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. 

ಭಾನುವಾರದಿಂದ ಮಳೆಯ ಅಬ್ಬರ ಜಾಸ್ತಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲೂಕುಗಳ ಶಾಲಾಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಲಾಗಿತ್ತು. ಕರಾವಳಿ ಮಲೆನಾಡು ಸಂಪರ್ಕದ ಚಾರ್ಮಾಡಿ ಘಾಟಿ ಸುತ್ತಮುತ್ತ ನಿರಂತರ ಮಳೆಯಾಗುತ್ತಿರುವುದರಿಂದ ಘಾಟಿ ಪ್ರದೇಶದಲ್ಲಿ ಮಂಜು ಆವರಿಸಿದ್ದು, ವಾಹನ ಸವಾರರು ಪರದಾಡುವಂತಾಗಿದೆ. 

ಚಿಕ್ಕಮಗಳೂರು ತಾಲೂಕಿನ ಗಿರಿ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಗಿರಿ ಪ್ರದೇಶದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ನಗರದ ಕೈಮರ ಸಮೀಪದ ಬಸವೇಶ್ವರ ಎಸ್ಟೇಟ್ ತಿರುವಿನ ಸಮೀಪ ಗುಡ್ಡ ಕುಸಿದು ಮುಳ್ಳಯ್ಯನ ಗಿರಿ, ಬಾಬಾ ಬುಡನ್‍ಗಿರಿ ಪ್ರದೇಶಕ್ಕೆ ಸಾಗುವ ಮಾರ್ಗವು ಸೋಮವಾರ ಬಂದ್ ಆಗಿದ್ದು, ಪ್ರವಾಸಿಗರು ಮತ್ತು ಸಾರ್ವಜನಿಕರು ರಸ್ತೆ ಸಂಪರ್ಕವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಗಿರಿ ಪ್ರದೇಶದಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಗಿರಿ ಪ್ರದೇಶಕ್ಕೆ ಸಾಗುವ ಪ್ರವಾಸಿಗರನ್ನು ಕೈಮರ ಚಕ್‍ಪೋಸ್ಟ್‍ನಲ್ಲಿ ತಡೆಯಲಾಗಿತ್ತು. ಇದರಿಂದ  ನೂರಾರು ಪ್ರವಾಸಿಗರ ಕಾರು ಸಾಲುಗಟ್ಟಿ ನಿಲ್ಲುವಂತಾಗಿತ್ತು. 

ಮೂಡಿಗೆರೆ, ಕಳಸ, ಹೊರನಾಡು ಭಾಗದಲ್ಲಿ ಕಳೆದ ನಾಲೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಈ ಭಾಗದಲ್ಲಿ ಹೇಮಾವತಿ ನದಿ, ಹಳ್ಳಕೊಳ್ಳ, ಆನೆಬಿದ್ದ ಹಳ್ಳ ತುಂಬಿ ಹರಿಯುತ್ತಿದ್ದು, ನದಿ, ಹಳ್ಳಕೊಳ್ಳ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹಳುವಳ್ಳಿಯ ತಾರಿಕೊಂಡ ಕಾಲನಿ ಸಮೀಪ ಗುಡ್ಡವೊಂದು ಕುಸಿದಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ. ಕೃಷಿ ಜಮೀನಿಗೂ ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಉದುಸೆ, ಕಣತಿ ಗ್ರಾಮಸ್ಥರಲ್ಲಿ ನೆರೆ ಭೀತಿ ಕಾಡುತ್ತಿದೆ. 

ಇನ್ನು ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಕೃಷ್ಣಮೂರ್ತಿ ಎಂಬವರಿಗೆ ಸೇರಿದ ಮನೆಯೊಂದು ಭಾರೀ ಮಳೆಗೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು ಬೀರೂರು ಭಾಗದಲ್ಲಿ ಮೋಡ ಕವಿದ ವಾತವರಣವಿದ್ದು, ಸೋನೆ ಮಳೆಯಾಗುತ್ತಿದೆ. 

ವಿದ್ಯುತ್ ಕಣ್ಣಮುಚ್ಚಾಲೆ: ಮಲೆನಾಡು ಭಾಗದಲ್ಲಿ ನಿರಂತರ ಮಳೆ ಮತ್ತು ಗಾಳಿಯಿಂದಾಗಿ ಮೂಡಿಗೆರೆ, ಕಳಸ, ಹೊರನಾಡು, ಕೊಟ್ಟಿಗೆಹಾರ ಭಾಗದಲ್ಲಿ ವಿಧ್ಯುತ್ ಕಣ್ಣಮುಚ್ಚಾಲೆ ಆಡುತ್ತಿದ್ದು, ಈ ಭಾಗದ ಜನರು ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ. 

ಮನೆಬಿಟ್ಟು ಹೊರಬಾರದ ಜನರು: ಮಲೆನಾಡು ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜನರು ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣವಾಗಿದೆ. 

ಶೃಂಗೇರಿ ತಾಲೂಕಿನಲ್ಲಿ ಸಾಕಷ್ಟು ಮಳೆ ಸುರಿದಿದ್ದು, ಶೃಂಗೇರಿ-93 ಮಿ.ಮೀ, ಕಿಗ್ಗಾ 105.5ಮಿ.ಮೀ, ಕೆರೆಕಟ್ಟೆ 173 ಮಿ.ಮೀ ಮಳೆಯಾದ ಬಗ್ಗೆ ವರದಿಯಾಗಿದೆ. ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ. ತುಂಗಾನದಿಯ ಹರಿವು ಹೆಚ್ಚಿದೆ. ಭತ್ತದ ಗದ್ದೆಗಳ ನಾಟಿ ಕಾರ್ಯ ಮುಗಿದರೂ ಶೀತದ ವಾತಾವರಣ ಹೆಚ್ಚಿದ್ದು ನೆಟ್ಟ ಸಸಿಗಳ ಕೆಲವು ಕಡೆ ಕೊಳೆಯಲು ಪ್ರಾರಂಭಗೊಂಡಿದೆ. ಕಾಳುಮೆಣಸಿನ ಬಳ್ಳಿಗಳು, ಕಾಫಿ ಹಾಗೂ ಅಡಿಕೆಮರಗಳ ಬುಡಗಳಲ್ಲಿ ಹೆಚ್ಚಿದ ನೀರಿನ ಅಂಶಗಳಿಂದ ಸೊರಗು, ಕೊಳೆರೋಗವು ಕಾಣಿಸಿಕೊಂಡಿದ್ದು ರೈತರ ಸ್ಥಿತಿ ಅತಂತ್ರದಲ್ಲಿದೆ. ಈ ವರುಷ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಸುರಿದಿದ್ದು, ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News