ತನ್ನ ಸಾಲಮನ್ನಾ ಮಾಡಬೇಡಿ ಎಂದು ಸರ್ಕಾರಕ್ಕೆ ಪತ್ರ ಬರೆದ ರೈತ !

Update: 2018-08-13 12:54 GMT

ಚಿಕ್ಕಮಗಳೂರು,ಆ.13: ತನ್ನ ಸಾಲಮನ್ನಾ ಮಾಡಬೇಡಿ ಎಂದು ಮೂಡಿಗೆರೆ ತಾಲೂಕಿನ ಕರಡಗೋಡು ಗ್ರಾಮದ ರೈತ ಅಮರನಾಥ್ ಸರ್ಕಾರಕ್ಕೆ ಪತ್ರ ಬರೆದು ಸ್ವಾಭಿಮಾನ ಮೆರೆದಿದ್ದಾರೆ. 

ಕೃಷಿಕ ಅಮರನಾಥ್ ಮುಖ್ಯಮಂತ್ರಿ, ಕೃಷಿ ಸಚಿವ, ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ತಮ್ಮ ಸಾಲಮನ್ನಾ ಮಾಡದಂತೆ ಒತ್ತಾಯಿಸಿದ್ದಾರೆ. 'ರಾಜ್ಯದ ರೈತರ ಒಂದು ಲಕ್ಷ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿರುವುದು ಸರಿಯಷ್ಟೇ. ತಾನು ಮೂಡಿಗೆರೆ ತಾಲೂಕಿನ ಕರಡಗೋಡು ಗ್ರಾಮದ ಸರ್ವೇ ನಂ.8ರಲ್ಲಿ 11 ಎಕರೆ ಜಮೀನು ಹೊಂದಿದ್ದು, ಜಮೀನು ಅಭಿವೃದ್ಧಿಗಾಗಿ ಮೂಡಿಗೆರೆ ಕರ್ನಾಟಕ ಬ್ಯಾಂಕ್‍ನಿಂದ 4 ಲಕ್ಷ ಸಾಲ ಪಡೆದಿದ್ದೇನೆ. ಸರ್ಕಾರದ ಸಾಲಮನ್ನಾ ಯೋಜನೆಯಿಂದ ಬಹಳಷ್ಟು ರೈತರಿಗೆ ಅನುಕೂಲವಾಗಬಹುದು. ಆದರೆ ನನ್ನನ್ನು ತಮ್ಮ ಸಾಲಮನ್ನಾ ಯೋಜನೆಯಿಂದ ವಿನಾಯಿತಿ ನೀಡಿ' ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಸರ್ಕಾರದ ಸಾಲಮನ್ನಾದಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ತಾನು ಪಡೆದಿರುವ ಸಾಲ ಮನ್ನಾ ಆಗಬಾರದು. ನನ್ನ ಸಾಲವನ್ನು ನಾನೇ ಮರುಪಾವತಿ ಮಾಡುತ್ತೇನೆ. ಇದರಿಂದ ನಾನು ಸ್ವಾಭಿಮಾನಿಯಾಗಿ ಬದುಕಲು ಸಾಧ್ಯವಾಗುತ್ತದೆ. ಸರ್ಕಾರದ ಋಣ ಹೊತ್ತುಕೊಳ್ಳಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಸರ್ಕಾರ ಸಾಲಮನ್ನಾದ ಬದಲಿಗೆ ನಾವು ಬೆಳೆದ ಬೆಳೆಗೆ ವೈಜ್ಞಾನಿಕ ಮತ್ತು ರೈತರು ಬಳಸುವ ರಸಗೊಬ್ಬರ, ಕೀಟನಾಶಕ ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಳೆದ ವರ್ಷ ಮಳೆ ಆಧಾರಿತ ಬೆಳೆಗೆ 7 ಸಾವಿರ ರೂ. ಬೆಳೆವಿಮೆಗೆ ಕಟ್ಟಿಸಿಕೊಂಡಿದ್ದು, ನನಗೆ ಆದ ನಷ್ಟದಷ್ಟು ಹಣವನ್ನು ಪಾವತಿಸದೆ ವಂಚಿಸಲಾಗಿದೆ ಎಂದ ಅವರು, ತಮ್ಮ ವಿಮೆ ಹಣವನ್ನು ವಾಪಾಸ್ ನೀಡುವಂತೆ ಕೋರಿದ್ದಾರೆ. ತನ್ನ ಆತ್ಮಸಾಕ್ಷಿ ನಿಮ್ಮ ಸಾಲಮನ್ನಾವನ್ನು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ಸಾಲಮನ್ನಾ ಯೋಜನೆಯಿಂದ ತಮ್ಮ ಹೆಸರು ಕೈಬಿಡುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News