ಪಕ್ಷದ ಯುವ ಮುಖಂಡನ 'ಫೇಸ್‍ಬುಕ್ ಸ್ಟೇಟಸ್': ಶಿವಮೊಗ್ಗ ಬಿಜೆಪಿ ಪಾಳೇಯದಲ್ಲಿ ಭಾರೀ ಚರ್ಚೆ

Update: 2018-08-13 14:20 GMT

ಶಿವಮೊಗ್ಗ, ಆ. 13: ಪಕ್ಷದ ಶಾಸಕರೊಬ್ಬರ 'ಸೆಕ್ಸ್ ಹಗರಣ' ಹೊರಹಾಕುವುದಾಗಿ ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರೊಬ್ಬರು ಸೋಮವಾರ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಾಕಿದ್ದಾರೆನ್ನಲಾದ ಸ್ಟೇಟಸ್, ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ಭಾರೀ ಚರ್ಚೆಗೆಡೆ ಮಾಡಿಕೊಡುವುದರ ಜೊತೆಗೆ ಸಾಕಷ್ಟು ಗೊಂದಲ ಸೃಷ್ಟಿಸಿದ ಘಟನೆ ನಡೆಯಿತು. 

ಭವಾನಿ ಮೊಹ್ರೆ ಎಂಬವರೇ ವಿವಾದಾತ್ಮಕ ಸ್ಟೇಟಸ್ ಹಾಕಿದ್ದಾರೆನ್ನಲಾದ ಯುವ ಮುಖಂಡ ಎಂದು ತಿಳಿದುಬಂದಿದೆ. ಅವರು ಹಾಕಿದ್ದ ಸ್ಟೇಟಸ್ ಕುರಿತಂತೆ ಪರ-ವಿರೋಧ ಚರ್ಚೆಗಳು ಫೇಸ್‍ಬುಕ್ ನಲ್ಲಿ ನಡೆಯಲಾರಂಭಿಸಿತ್ತು. ಕೆಲವರು ತಕ್ಷಣವೇ ಇದನ್ನು ಡಿಲೀಟ್ ಮಾಡುವಂತೆಯೂ ಸಂದೇಶ ಹಾಕಿದ್ದರು. ಪಕ್ಷದ ಪಾಳೇಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಭವಾನಿ ಮೊಹ್ರೆ ಈ ಸ್ಟೇಟಸ್‍ನ್ನು ಡಿಲೀಟ್ ಕೂಡ ಮಾಡಿದ್ದಾರೆ ಎನ್ನಲಾಗಿದೆ. 

ಆರೋಪವೇನು?: ಸೋಮವಾರ ಬೆಳಗ್ಗೆ ಭವಾನಿ ಮೊಹ್ರೆ ಎಂಬ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ 'ಬಿಜೆಪಿ ಕಾಮುಕ ಶಾಸಕ ನಾಯಕನ ಕರ್ಮಕಾಂಡ ಬಯಲು, ಕೆಎಸ್‍ಇ ಮನೆ ಮುಂದೆ ನಿರೀಕ್ಷಿಸಿ' ಎಂಬ ಸಂದೇಶವನ್ನು ಹಾಕಿದ್ದರು. ಅವರು ಈ ಸಂದೇಶ ಹಾಕಿದ ಕೆಲ ನಿಮಿಷಗಳಲ್ಲಿಯೇ ಅವರ ಫೇಸ್‍ಬುಕ್ ಖಾತೆಯಲ್ಲಿ ಕಮೆಂಟ್‍ಗಳು ಹರಿದು ಬರಲಾರಂಭಿಸಿದ್ದವು. 

'ಯಾರು ಆ ನಾಯಕ?' ಎಂಬ ಕುತೂಹಲದ ಪ್ರಶ್ನೆಗಳನ್ನು ಕೆಲವರು ಮುಂದಿಟ್ಟಿದ್ದರು. ನಂತರ ಕಮೆಂಟ್‍ವೊಂದಕ್ಕೆ ಮೊಹ್ರೆಯವರು, 'ಅವನೇ ಟಿಕೆಟ್ ಬೇಕು ಎಂದರೆ ತಲೆ ಹಿಡಿ...' ಎಂಬ ಖಾರವಾದ ಸಂದೇಶ ಹಾಕಿದ್ದರೆನ್ನಲಾಗಿದ್ದು, ತದನಂತರ ಹಲವರು ಯಾರು ಆ ನಾಯಕ ಎಂಬ ಕಮೆಂಟ್‍ಗಳನ್ನು ಹಾಕಿದ್ದರು. 

ಮತ್ತೆ ಕೆಲವರು ತಕ್ಷಣವೇ ಈ ಸ್ಟೇಟಸ್ ಡಿಲೀಟ್ ಮಾಡುವಂತೆ, ಬಹಿರಂಗವಾಗಿ ಈ ರೀತಿಯ ಚರ್ಚೆಗಳು ಸರಿಯಲ್ಲ ಎಂಬಿತ್ಯಾದಿ ಸಲಹೆಗಳನ್ನು ಕೂಡ ನೀಡಿದ್ದರು. ಭವಾನಿ ಮೊಹ್ರೆಯವರ ಈ ಸ್ಟೇಟಸ್ ಕೆಲವೆ ಗಂಟೆಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವ್ಯಾಟ್ಸಾಪ್ ಮತ್ತಿತರ ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿಯೂ ಸದ್ದು ಮಾಡಲಾರಂಭಿಸಿತ್ತು. ಪಕ್ಷದ ಹಿರಿಯ ಮುಖಂಡರಿಗೂ ಈ ವಿಷಯ ತಲುಪಿತ್ತು. ಕೆಲ ಮುಖಂಡರು ಭವಾನಿ ಮೊಹ್ರೆಯವರನ್ನು ಸಂಪರ್ಕಿಸಿ, ತಕ್ಷಣವೇ ವಿವಾದಾತ್ಮಕ ಸ್ಟೇಟಸ್ ಡಿಲೀಟ್ ಮಾಡುವಂತೆ ತಾಕೀತು ಮಾಡಿದ್ದರು ಎನ್ನಲಾಗಿದೆ. ನಾಯಕರ ಒತ್ತಡಕ್ಕೆ ಮಣಿದ ಭವಾನಿ ಮೊಹ್ರೆಯವರು ತಾವಾಕಿದ್ದ ಸ್ಟೇಟಸ್ ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಭವಾನಿ ಮೊಹ್ರೆಯವರು ಪಕ್ಷದ ಶಾಸಕರ ವಿರುದ್ಧವೇ ಈ ರೀತಿಯ ಸ್ಟೇಟಸ್ ಹಾಕಿದ್ದು ಏಕೆ? ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಾಗಿದೆ. ಒಟ್ಟಾರೆ ಪಕ್ಷದ ಯುವ ನಾಯಕನ ಫೇಸ್‍ಬುಕ್ ಸ್ಟೇಟಸ್ ಕಮಲ ಪಾಳೇಯದ ನಿದ್ದೆಗೆಡಿಸಿದ್ದಂತೂ ಸತ್ಯ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News