"ದಲಿತ ಕೇರಿಗಳಲ್ಲಿರುವ ಹಿಂದೂ ದೇವಾಲಯಗಳನ್ನು ಮುಚ್ಚಿ ಬುದ್ಧ ಮಂದಿರಗಳನ್ನು ತೆರೆಯಿರಿ"

Update: 2018-08-13 14:48 GMT

ಮೈಸೂರು,ಆ.13: ದಲಿತ ಕೇರಿಗಳಲ್ಲಿರುವ ಹಿಂದೂ ದೇವರುಗಳ ದೇವಾಲಯಗಳನ್ನು ಮುಚ್ಚಿ ಬುದ್ಧ ಮಂದಿರಗಳನ್ನು ತೆರೆಯಿರಿ ಎಂದು ಪ್ರಗತಿಪರ ಚಿಂತಕ ಹಾಗೂ ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಕರೆ ನೀಡಿದರು.

ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನ ಸುಟ್ಟ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂಗಳಂತೆ ನಾವು ಬ್ರಹ್ಮನಿಂದ ಹುಟ್ಟಿಲ್ಲ. ನಾವು ಹುಟ್ಟಿರುವುದು ನಮ್ಮ ತಂದೆ ತಾಯಿಯರಿಂದ. ಶಿವ, ವಿಷ್ಣುವಿನ  ಫೋಟೊಗಳನ್ನು ಪೂಜೆ ಮಾಡುವುದು ಬೇಡ. ಬುದ್ಧ, ಅಂಬೇಡ್ಕರ್ ಫೋಟೋಗಳನ್ನು ಪೂಜೆ ಮಾಡೋಣ ಎಂದರು. 

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಟೀ ಮಾಡಿ ಮಾರೋದಕ್ಕಷ್ಟೇ ಸರಿ. ದೇಶವನ್ನು ನಡೆಸಲು ಸೂಕ್ತ ವ್ಯಕ್ತಿ ಅಲ್ಲ. ನಾನು ಕೂಡ ಮೋದಿ ಮಾಡುವ ಟೀ ಕುಡಿದಿದ್ದೇನೆ. ಆದರೆ ಟೀ ಚೆನ್ನಾಗಿ ಮಾಡ್ತಾರೆ. ದೇಶ ನಡೆಸಲು ಬರಲ್ಲ ಎಂದು ಕಿಡಿಕಾರಿದರು. ಹಾರ್ಟ್ ಅಟ್ಯಾಕ್ ಆಗಿರುವ ಕುಮಾರಸ್ವಾಮಿಗೆ ಮೋದಿ ಫಿಟ್ ನೆಸ್ ಚಾಲೆಂಜ್ ಕೊಡ್ತಾರೆ. ಕುಮಾರಸ್ವಾಮಿಯಂತೆ ಕೇಂದ್ರದಲ್ಲಿ ಅಧಿಕಾರ ಮಾಡಲಿ ಎಂದು ಸವಾಲು ಹಾಕಿದರು.

ಬಲ್ಲಾಳ್ ಸರ್ಕಲ್ ನಿಂದ ಸಾಹಿತಿ ಭಗವಾನ್, ಅಶೋಕ್ ಪುರಂ ನಿವಾಸಿಗಳ ನೇತೃತ್ವದಲ್ಲಿ ಹೊರಟ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾಪ್ತಿಗೊಂಡಿತು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಧರಣಿ ನಿರತರ ಮನವಿ ಸ್ವೀಕರಿಸಿದರು. ಈ ವೇಳೆ ಪ್ರತಿಭಟನಾಕಾರರು ಕೂಡಲೇ ಸಂವಿಧಾನವನ್ನು ಸುಟ್ಟಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ  ಮಾಜಿ ಮೇಯರ್ ಪುರುಷೋತ್ತಮ್, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರಧಾನಿ ಸೇರಿ ಹಲವು ಜನಪ್ರತಿನಿಧಿಗಳ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮತ್ತು ಜಾಕೀರ್ ಹುಸೇನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News