ಶಿವಮೊಗ್ಗ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪ್ರಾಬಲ್ಯ ನಿಶ್ಚಿತ: ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್
ಶಿವಮೊಗ್ಗ, ಆ. 13: ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಪ್ರಾಬಲ್ಯ ಸಾಧಿಸುವುದು ನಿಶ್ಚಿತವಾಗಿದೆ. ಸ್ವತಂತ್ರವಾಗಿ ಪಾಲಿಕೆ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್‍ರವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 'ಈ ಚುನಾವಣೆಯು ಪಕ್ಷಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಕಾರಣದಿಂದ ಮುಖಂಡರು, ಕಾರ್ಯಕರ್ತರು ಶ್ರಮಮೀರಿ ಕೆಲಸ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು' ಎಂದು ಕಿವಿಮಾತು ಹೇಳಿದರು.
ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 35 ವಾರ್ಡ್‍ಗಳಲ್ಲಿಯೂ ಒಮ್ಮತದ ಅಭ್ಯರ್ಥಿಯನ್ನು ಪಕ್ಷದಿಂದ ಕಣಕ್ಕಿಳಿಸಲಾಗುವುದು. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದ ಪಕ್ಷ ಯಾರಿಗೆ ಟಿಕೆಟ್ ನೀಡಲಿದೆಯೋ ಅವರ ಪರವಾಗಿ ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು. ಯಾವುದೇ ಗೊಂದಲ, ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರ ವಹಿಸಬೇಕು ಎಂದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನಪರ ಕಾರ್ಯಗಳ ಮೂಲಕ ಸೀಮಿತಾವಧಿಯಲ್ಲಿಯೇ ಜನಮಾನಸದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಇದು ಕೂಡ ಶಿವಮೊಗ್ಗ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಉತ್ತಮ ಸಾಧನೆಗೆ ಕಾರಣವಾಗಲಿದೆ. ಕಾರ್ಯಕರ್ತರು ಮತದಾರರ ಮನೆ ಬಾಗಿಲಿಗೆ ತೆರಳಿ ಹೆಚ್.ಡಿ.ಕುಮಾರಸ್ವಾಮಿಯವರ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು. ಈ ಮೂಲಕ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಬೇಕು ಎಂದು ಸಲಹೆ ನೀಡಿದರು.
ಸನ್ಮಾನ: ಮಲೇಷಿಯಾದ ಜಕಾರ್ತದಲ್ಲಿ ನಡೆಯಲಿರುವ ಏಷಿಯನ್ ಗೇಮ್ಸ್ ಪಂದ್ಯಾವಳಿಗೆ ಭಾರತದಿಂದ ತೆರಳುತ್ತಿರುವ ಅಮೆಚೂರ್ ಕಬಡ್ಡಿ ತಂಡದ ಮ್ಯಾನೇಜರ್ ಆಗಿ ಆಯ್ಕೆಯಾಗಿರುವ ಎಂ.ಶ್ರೀಕಾಂತ್‍ರವರಿಗೆ ಇದೇ ಸಂದರ್ಭದಲ್ಲಿ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸುಬ್ಬೇಗೌಡ, ಜಿ.ಮಾದಪ್ಪ, ಮಹಮ್ಮದ್ ಯೂಸೂಫ್ ಭಯ್ಯಾ, ನಾಗರಾಜ್ ಕಂಕಾರಿ, ಜಿ.ಡಿ.ಮಂಜುನಾಥ್, ಎಂ.ರಾಜಣ್ಣ, ರೇಖಾ ಚಂದ್ರಶೇಖರ್, ಶಾಂತ ಸುರೇಂದ್ರ ಸೇರಿದಂತೆ ಮೊದಲಾದವರಿದ್ದರು.