ತುಮಕೂರು: ಆ.15 ರಂದು 'ಹಸಿರು ಕರ್ನಾಟಕ ಯೋಜನೆ' ಗೆ ಚಾಲನೆ

Update: 2018-08-13 17:36 GMT

ತುಮಕೂರು,ಆ.13: ಮುಖ್ಯಮಂತ್ರಿಗಳು 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ;ಹಸಿರು ಕರ್ನಾಟಕ’ ಯೋಜನೆ ಅನುಷ್ಠಾನಕ್ಕೆ ಘೋಷಣೆ ಮಾಡಿದ್ದು, ಇದರ ಪ್ರಯುಕ್ತ ಆ.15 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಸಿರು ಕರ್ನಾಟಕ ಕಾರ್ಯಕ್ರಮದಡಿ ಅರಣ್ಯ ಬೆಳವಣಿಗೆಗೆ ಹೆಚ್ಚು ಒತ್ತು ನೀಡುವ ಮೂಲಕ ಸಣ್ಣಪುಟ್ಟ ಬೆಟ್ಟ-ಗುಡ್ಡಗಳು, ಗೋಮಾಳಗಳು, ಕೆರೆಗಳ ಸುತ್ತಮುತ್ತಲ ಸರಕಾರಿ ಜಮೀನುಗಳಲ್ಲಿ ಆಯಾ ಪ್ರದೇಶಕ್ಕೆ ಬೆಳೆಯುವ ಸ್ಥಳೀಯ ಜಾತಿಯ ಮರ-ಗಿಡಗಳನ್ನು ಬೆಳೆಸಲಾಗುವುದು ಎಂದರು.

ಈ ಯೋಜನೆಗೆ ಜನಪ್ರತಿನಿಧಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪರಿಸರ ಸಂಘಟನೆಗಳು, ಸಾರ್ವಜನಿಕರು ಸಕ್ರೀಯವಾಗಿ ತೊಡಗಿಕೊಂಡು ಮನೆಗೊಂದು ಮರ-ಊರಿಗೊಂದು ತೋಪು, ತಾಲೂಕಿಕೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ಬೆಳೆಸುವುದು ಈ ಕಾರ್ಯಕ್ರಮದ ಧ್ಯೇಯವಾಗಿದೆ. ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ತಲಾ 10 ಹೆಕ್ಟೇರ್ ಪ್ರದೇಶದಲ್ಲಿ ವನ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದ್ದು, ಬೇಡಿಕೆ ಆಧರಿಸಿ ಎಲ್ಲಾ ಮನೆಗಳಿಗೆ ಅಗತ್ಯವಿರುವ ಸಸಿಗಳನ್ನು ವಿತರಣೆ ಮಾಡಲಾಗುವುದು. ಅವುಗಳನ್ನು ಪೋಷಣೆ ಮಾಡುವ ಜವಾಬ್ದಾರಿಯನ್ನು ಆಯಾ ಮನೆಯವರಿಗೆ ನೀಡಲಾಗುವುದು ಎಂದು ರಾಕೇಶ್‍ ಕುಮಾರ್ ತಿಳಿಸಿದರು.

ಈ ಯೋಜನೆಗೆ ನಿಗದಿತ ಅನುದಾನ ಮತ್ತು ಅಗತ್ಯ ಸಸಿಗಳು ಇದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಇವುಗಳ ರಕ್ಷಣೆಗಾಗಿ ಒಂದು ಟಾಸ್ಕ್ ಪೋರ್ಸ್ ಅಗತ್ಯವಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ ಮಾತನಾಡಿ, ಆ.14 ರಂದು ಬೆಳಗ್ಗೆ 8 ಗಂಟೆಗೆ ನಗರದ ಟೌನ್‍ಹಾಲ್ ವೃತ್ತದಿಂದ ಮಹಾತ್ಮಗಾಂಧಿ ಕ್ರೀಡಾಂಗಣದವರೆಗೆ ವಿದ್ಯಾರ್ಥಿಗಳಿಂದ ಸಸಿ ಬೆಳೆಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಜಾಥಾದಲ್ಲಿ ಸುಮಾರು 500ಕ್ಕೂ ಹೆಚ್ಚು ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಎನ್ ಜಿಒಗಳು ಭಾಗವಹಿಸಲಿದ್ದಾರೆ ಎಂದ ಅವರು, ಹಸಿರು ಕರ್ನಾಟಕ ಯೋಜನೆಯನ್ನು ಆ.15 ರಿಂದ 18 ರವರೆಗೆ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‍ಬಾಬಾರೈ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News