ತುಮಕೂರು: ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಮಾಜಿ ಸಚಿವ ಸೊಗಡು ಶಿವಣ್ಣ ಆಗ್ರಹ

Update: 2018-08-13 17:41 GMT

ತುಮಕೂರು,ಆ.13: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಡ್ರಗ್ಸ್ ಮಾಫಿಯಾ ಹಾಗೂ ಮಟ್ಕಾ ಹಾವಳಿ ಹೆಚ್ಚಾಗಿದ್ದರೂ ಸಹ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಗಮನ ಹರಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದಲ್ಲಿ ಯುವಕರು ಗಾಂಜಾ, ಅಫೀಮು, ಚರಸ್, ರಾಮರಸ ಸೇರಿದಂತೆ ಇನ್ನಿತರೆ ಮಾದಕ ವಸ್ತುಗಳ ಸೇವನೆಯ ದಾಸರಾಗುತ್ತಿದ್ದಾರೆ. ಅದರಲ್ಲೂ ಶ್ರೀಮಂತ ಕುಟುಂಬದ ಮಕ್ಕಳು ಹೆಚ್ಚಿನ ಮೌಲ್ಯದ ಮಾದಕ ವಸ್ತುಗಳನ್ನು ಖರೀದಿಸಿ ಉಪಯೋಗಿಸುತ್ತಾರೆ. ಬಡಮಕ್ಕಳು, ಯುವಕರು ಪಂಕ್ಚರ್ ಸಲ್ಯೂಷನ್, ಶೂಪಾಲಿಶ್, ಇಂತಹ ಕಡಿಮೆ ಬೆಲೆಯುಳ್ಳ ವಸ್ತುಗಳನ್ನು ಖರೀದಿಸಿ ಸೇವಿಸುವ ಮೂಲಕ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ ಎಂದರು.

ಮಾದಕ ವಸ್ತುಗಳ ಸೇವನೆಯಿಂದ ಯುವಕರು ಮಾನಸಿಕ ವ್ಯಸನಿಗಳಾಗಿರುವ ಜತೆಗೆ ಶಾರೀರಿಕ, ದುರ್ಬಲತೆ, ಜೀವನದಲ್ಲಿ ನಿರುತ್ಸಾಹ, ಹಣಕ್ಕಾಗಿ ಪರಿತಪಿಸುವುದು, ಮನೆಯಲ್ಲಿ ಕಳ್ಳತನ, ಸರಗಳ್ಳತನ, ಸಾಲ ಮಾಡುವಂತಹ ಚಟುವಟಿಕೆಗಳಲ್ಲಿ ತೊಡಗಿ ಅಂತಿಮವಾಗಿ ಸಮಾಜಘಾತುಕರಾಗುತ್ತಾರೆ. ಇಲ್ಲವೇ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. 

ನಗರದ ನಿರ್ವಾಣಿ, ಲೇಔಟ್, ಎಸ್.ಆರ್.ಕಾಲೋನಿ, ಹನುಮಂತಪುರ, ಬೆಳಗುಂಬ ಹೊಸಬಡಾವಣೆ, ಟಿ.ಪಿ. ಕೈಲಾಸಂ ರಸ್ತೆಯ ಕೊನೆಯ ಪ್ರದೇಶ, ಮರಳೂರು ಭದ್ರತಾ ಕಾಲೋನಿ, ಗೂಡ್ಸ್‍ಶೆಡ್ ಕಾಲೋನಿ, ಎಸ್‍ಐಟಿ ಕಾಲೇಜು ಹಿಂಭಾಗ, ರಿಂಗ್ ರಸ್ತೆ,ಗುಬ್ಬಿ ಗೇಟ್ ಬಳಿ ಇರುವ ಧಾನಾ ಪ್ಯಾಲೇಸ್ ವರೆಗಿನ ಪ್ರದೇಶಗಳಲ್ಲಿ ಈ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಆರೋಪಿಸಿದರು.

ಮಾದಕ ವ್ಯಸನಿಗಳ ವಿರುದ್ಧ ಕ್ರಮ ಕೈಗೊಂಡು ಯಾರನ್ನಾದರೂ ಬಂಧಿಸಿ ವಿಚಾರಣೆಗೊಳಪಡಿಸಿದ್ದರೆ ನಗರದಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯ ಮಾಹಿತಿ ದೊರೆಯುತ್ತಿತ್ತು. ಆದರೆ ಪೊಲೀಸ್ ಇಲಾಖೆಯ ಎಸ್‍ಎಸ್‍ಬಿ ಹಾಗೂ ಇತರ ವಿಭಾಗದ ಅಧಿಕಾರಿಗಳು ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾಮದ ಸುತ್ತಮುತ್ತ 72 ಕಿ.ಜಿ. ಗಾಂಜಾ ವಶಪಡಿಸಿಕೊಳ್ಳಲಾಯಿತು. ಆದರೆ ಇದುವರೆವಿಗೂ ಯಾರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದರು. 

ಡ್ರಗ್ ಮಾಫಿಯಾ ಜೊತೆಗೆ ಮಟ್ಕಾ ದಂಧೆ, ದನಗಳ ಕಳ್ಳತನ ಜಾಸ್ತಿಯಾಗಿದೆ. ಇಂತಹ ಸಮಾಜಘಾತುಕ ಚಟುವಟಿಕೆಗಳು ನಡೆಯುತ್ತಿರುವುದನ್ನು ಗಮನಿಸಿದರೆ ತುಮಕೂರು ಕಳ್ಳಕಾಕರ ಮಾಫಿಯಾಗಳ ಕೇಂದ್ರವಾಗುತ್ತಿದೆಯೆನೋ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗಮನ ಹರಿಸಿ ತುಮಕೂರು ಜಿಲ್ಲೆಯಲ್ಲಿ ಸಮಾಜ ಘಾತುಕ ಚಟುವಟಿಕೆಗಳನ್ನು ನಡೆಯದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆ.ಪಿ.ಮಹೇಶ್, ಜಯಸಿಂಹ, ಶಾಂತರಾಜು, ಕೆ.ಹರೀಶ್, ರಮೇಶ್, ಗೋವಿಂದರಾಜು ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News