ತುಮಕೂರು: ಸಂವಿಧಾನ ಸುಟ್ಟ ಕಿಡಿಗೇಡಿಗಳ ಬಂಧನಕ್ಕೆ ದಸಂಸ ಆಗ್ರಹ

Update: 2018-08-13 17:47 GMT

ತುಮಕೂರು,ಆ.13: ಪ್ರತಿಭಟನೆಯ ನೆಪದಲ್ಲಿ ಸಂವಿಧಾನದ ಪುಸ್ತಕವನ್ನು ಸುಟ್ಟ ಕಿಡಿಗೇಡಿಗಳನ್ನ ಬಂಧಿಸಬೇಕು, ಅಂಬೇಡ್ಕರ್ ಭವನವನ್ನು ಪುನಶ್ಚೇತನಗೊಳಿಸಬೇಕು, ಬಾಬು ಜಗಜೀವನರಾಂ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು ಹಾಗೂ ಗ್ರಾಮೀಣ ಭಾಗದಲ್ಲಿ ದಲಿತರಿಗೆ ಪ್ರತ್ಯೇಕ ಸ್ಮಶಾನ ಜಾಗಗಳನ್ನು ಗುರುತಿಸಿ, ಒದಗಿಸಬೇಕು ಎಂದು ಆಗ್ರಹಿಸಿ ಸೋಮವಾರ ದಲಿತ ಸಂಘರ್ಷ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ನೇತೃತ್ವದಲ್ಲಿ ಹಲವು ದಲಿತ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಭಾರತದ ಸಂವಿಧಾನ ಕೇವಲ ದಲಿತರಿಗೆ ಸೀಮಿತವಾಗಿಲ್ಲ. ಈ ದೇಶದಲ್ಲಿ ಬದುಕುತ್ತಿರುವ ಎಲ್ಲಾ ವರ್ಗದ ಜನರಿಗೂ ನ್ಯಾಯವನ್ನು ಒದಗಿಸುತ್ತದೆ. ಆದರೆ ಇದರ ಬಗ್ಗೆ ಅರಿವಿಲ್ಲದ, ಪೂರ್ವಾಗ್ರಹ ಪೀಡಿತರಾದ ಕೆಲವರು ಪ್ರತಿಭಟನೆಯ ಹೆಸರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ದ ಘೋಷಣೆ ಕೂಗಿದ್ದಲ್ಲದೆ, ಅವರು ಬರೆದ ಸಂವಿಧಾನವನ್ನು ಸುಟ್ಟು ಘನ ಘೋರ ಅಪರಾಧ ಎಸಗಿದ್ದಾರೆ. ಸಾಮಾಜಿಕ ನ್ಯಾಯದ ವಿರುದ್ದ ಹೋರಾಟ ನಡೆಸಿರುವ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಎಲ್ಲರಿಗೂ ಸಮಬಾಳು, ಎಲ್ಲರಿಗು ಸಮಪಾಲು ಎನ್ನುವ ಸಂವಿಧಾನವನ್ನು ಬದಲಿಸುವ ಮಾತುಗಳನ್ನಾಡುತ್ತಿದ್ದಾರೆ. ಈಗ ಸಂವಿಧಾನದ ಪುಸ್ತಕವನ್ನೇ ಸುಡುವ ಕೆಲಸ ಆಗುತ್ತಿದೆ. ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಈ ದೇಶಕ್ಕೆ ಅಪಾಯ ತಪ್ಪಿದಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ದಸಂಸ ಮುಖಂಡರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತ ನಗರದ ಎಂ.ಜಿ.ರಸ್ತೆಯ ಅಂಬೇಡ್ಕರ್ ಭವನವನ್ನು ಪುನಶ್ಚೇತನಗೊಳಿಸಬೇಕು. ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಬೇಕು. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಗುರುತಿಸಿರುವ ಸ್ಮಶಾನ ಜಾಗಗಳಿಗೆ ಬೇಲಿ ನಿರ್ಮಿಸಿ, ಗ್ರಾ.ಪಂ ವಶಕ್ಕೆ ನೀಡಬೇಕು. ಸ್ಮಶಾನವಿಲ್ಲದ ಗ್ರಾಮಗಳಲ್ಲಿ ಸ್ಮಶಾನ ಜಾಗವನ್ನು ಗುರುತಿಸುವ ಕೆಲಸ ಆಗಬೇಕೆಂದು ಮನವಿಯಲ್ಲಿ ಕೋರಲಾಗಿದೆ.

ಈ ವೇಳೆ ದಲಿತ ಮುಖಂಡರಾದ ಎ.ನಾಗೇಶ್, ವೆಂಕಟೇಶ್,ಸುರೇಶ್, ಜೆ.ಸಿ., ಬಂಡೆಕುಮಾರ್, ಬಸವರಾಜ್, ರಂಜನ್, ಗೋಪಾಲ್ ಮತ್ತು ಕೃಷ್ಣಮೂರ್ತಿ ಮತ್ತಿತರರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News