ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುವುದು ಸರಿಯಲ್ಲ: ದೇವೇಗೌಡರ ವಿರುದ್ಧ ಆರ್.ಅಶೋಕ್ ಆಕ್ರೋಶ

Update: 2018-08-13 18:18 GMT

ಮಡಿಕೇರಿ, ಆ.13: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮಿತಿ ಮೀರಲು ಬಾಂಗ್ಲಾ ವಲಸಿಗರೇ ಕಾರಣವೆಂದು ಅಭಿಪ್ರಾಯಪಟ್ಟಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಬಾಂಗ್ಲಾ ವಲಸಿಗರನ್ನು ಬೆಂಬಲಿಸುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಆರ್.ಅಶೋಕ್ ಅವರು ಇಂದು ನಗರಕ್ಕೆ ಆಗಮಿಸಿ ಪಕ್ಷದ ಪ್ರಮುಖರೊಂದಿಗೆ ಪಟ್ಟಣ ಪಂಚಾಯತ್ ಚುನಾವಣೆಯ ಮಾಹಿತಿ ಪಡೆದರು. ನಂತರ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವೇಗೌಡರ ನಡೆಯನ್ನು ಟೀಕಿಸಿದರು.

ರಾಜ್ಯದಲ್ಲಿ ಕಾಲೇಜು ಹಾಗೂ ಹೈಸ್ಕೂಲ್ ಮಟ್ಟದಲ್ಲಿ ಡ್ರಗ್ಸ್ ಹಾವಳಿ ಮಿತಿಮೀರಿದೆ. ಇದನ್ನು ತಡೆಗಟ್ಟುವಂತೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಡ್ರಗ್ ಮಾಫಿಯಾಕ್ಕೆ ಬಾಂಗ್ಲಾದೇಶಿಗರು ಕಾರಣಕರ್ತರಾಗಿದ್ದಾರೆ. ಆದರೆ ಬಾಂಗ್ಲಾ ವಲಸಿಗರ ಪರವಾಗಿರುವ ಮಮತಾ ಬ್ಯಾನರ್ಜಿ ಅವರ ಬೆಂಬಲಕ್ಕೆ ಮಾಜಿ ಪ್ರಧಾನಿ ದೇವೇಗೌಡರು ನಿಂತಿರುವುದು ಸರಿಯಾದ ಕ್ರಮವಲ್ಲವೆಂದು ಟೀಕಿಸಿದರು.

ನಿಂಬೆ ಹಣ್ಣಿನೊಂದಿಗೆ ವಿಧಾನ ಸಭೆ ಪ್ರವೇಶ ಮಾಡುವ ರೇವಣ್ಣ, ರಾಹು ಕಾಲದಲ್ಲಿ ಅಂಗೀಕಾರವಾಗದ ಮಸೂದೆ, ಹೀಗೆ ಪ್ರತಿಯೊಂದಕ್ಕೂ ವಾಸ್ತುವಿನ ಮೊರೆ ಹೋಗುತ್ತಿದ್ದು, ರಾಜ್ಯದಲ್ಲಿರುವುದು ವಾಸ್ತುದೋಷವಿರುವ ಸರ್ಕಾರವೆಂದು ಅಶೋಕ್ ವ್ಯಂಗ್ಯವಾಡಿದರು.

ವಾಸ್ತು ದೋಷದ ನೆಪವೊಡ್ಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ಅಧಿಕೃತ ನಿವಾಸಕ್ಕೆ ಪ್ರವೇಶಿಸಿಲ್ಲ. ಹೆಚ್.ಡಿ.ರೇವಣ್ಣ ರಾಜ್ಯದ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಲೇ ಇದ್ದು, ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲವೆಂದರು. 

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಮೂಲಕ ಎದುರಿಸುವುದಾಗಿ ಹೇಳಿಕೊಂಡಿವೆ. ಆದರೆ, ಚುನಾವಣೆ ಎದುರಿಸುವ ವಿಚಾರದಲ್ಲಿ ಈ ಪಕ್ಷಗಳ ನಡುವೆ ಹೊಂದಾಣಿಕೆಯೇ ಆಗುತ್ತಿಲ್ಲ. ದೇವೇಗೌಡರು ಕಾಂಗ್ರೆಸ್‍ನ್ನು ಅವನತಿಯ ಹಾದಿಯಲ್ಲಿರುವ ಪಕ್ಷ ಎಂದು ಟೀಕಿಸಿದರೆ, ಇತ್ತ ಕಡೆ ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಕುಳಿತು ಸ್ವತಂತ್ರವಾಗಿ ಚುನಾವಣೆ ಎದುರಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.

ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದ್ದು, 3 ಪಟ್ಟಣ ಪಂ. ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್ ಹಾಗೂ ರಾಜ್ಯ  ಕಾರ್ಯದರ್ಶಿ  ಮನು ಮುತ್ತಪ್ಪ  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News